ಮಂಡ್ಯ: ರಸ್ತೆ ಬದಿಯಲ್ಲಿ ಇರುವ ತಳ್ಳುವ ಗಾಡಿಯಲ್ಲಿ ಐಸ್ ಕ್ರೀಮ್ ತಿಂದ ಬಳಿಕ ಅಸ್ವಸ್ಥರಾಗಿದ್ದ ಒಂದೂವರೆ ವರ್ಷದ ಅವಳಿ ಮಕ್ಕಳು ಅನುಮಾನಾಸ್ಪದವಾಗಿ ಸಾವಿಗೀಡಾಗಿರುವ ಘಟನೆ ಜಿಲ್ಲೆಯ ಶ್ರೀರಂಗಪಟ್ಟಣ ತಾಲೂಕಿನ ಬೆಟ್ಟಹಳ್ಳಿ ಗ್ರಾಮದಲ್ಲಿ ನಡೆದಿದೆ.
ಪೂಜಾ, ಪ್ರಸನ್ನ ದಂಪತಿ ಮಕ್ಕಳಾದ ತ್ರಿಶುಲ್ ಹಾಗೂ ತ್ರಿಶಾ ಸಾವನ್ನಪ್ಪಿದ ಮಕ್ಕಳು. ನಿನ್ನೆ ಮಧ್ಯಾಹ್ನ ತಾಯಿ ಪೂಜಾ ತಳ್ಳುವ ಗಾಡಿಯಾತನಿಂದ ಐಸ್ ಕ್ರೀಮ್ ಖರೀದಿಸಿ ಮಕ್ಕಳಿಗೆ ತಿನ್ನಿಸಿದ್ದರು. ಐಸ್ ಕ್ರೀಂ ತಿಂದ ಕೆಲವೇ ಸಮಯದಲ್ಲಿ ಮಕ್ಕಳು ಅಸ್ವಸ್ಥರಾಗಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯದಲ್ಲಿ ಮೃತರಾದರು ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಅವರೊಂದಿಗೆ ಐಸ್ ಕ್ರೀಂ ತಿಂದಿದ್ದ ಪೂಜಾ ಕೂಡ ಅಸ್ವಸ್ಥಗೊಂಡಿದ್ದು, ಮಂಡ್ಯ ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದೆ.
ಇನ್ನು ಐಸ್ ಕ್ರೀಂ ತಿಂದೇ ಅವಳಿ ಜವಳಿ ಮಕ್ಕಳು ಸಾವು ಕಂಡಿದ್ದಾರೆಯೇ ಎನ್ನುವ ಬಗ್ಗೆಯೂ ಅನುಮಾನಗಳಿವೆ. ಏಕೆಂದರೆ, ಇದೇ ಗ್ರಾಮದ ಬೇರೆ ಮಕ್ಕಳು ಕೂಡ ಐಸ್ ಕ್ರೀಂ ಖರೀದಿ ಮಾಡಿ ತಿಂದಿದ್ದರು. ಆದರೆ, ಬೇರೆ ಯಾವ ಮಕ್ಕಳಿಗೂ ಯಾವುದೇ ರೀತಿಯ ಸಮಸ್ಯೆ ಆಗಿಲ್ಲ ಎನ್ನಲಾಗಿದೆ.
ಹಾಗಾಗಿ ಅವಳಿ ಜವಳಿ ಮಕ್ಕಳ ಸಾವಿಗೆ ಕಾರಣವೇನು ಎನ್ನುವುದು ಇನ್ನೂ ಬಹಿರಂಗವಾಗಿಲ್ಲ. ಮಕ್ಕಳ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ಆ ಬಳಿಕವೇ ಸಾವಿಗೆ ನಿಖರವಾದ ಕಾರಣ ತಿಳಿಯಲಿದೆ. ಮಿಮ್ಸ್ ಆಸ್ಪತ್ರೆಗೆ ಶವಗಳನ್ನು ಕಳುಹಿಸಲಾಗಿದ್ದು, ಅಲ್ಲಿಯೇ ಮರಣೋತ್ತರ ಪರೀಕ್ಷೆ ನಡೆಯಲಿದೆ.
ಘಟನೆ ಸಂಬಂಧ ಅರೆಕೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










