ಒಂದೇ ಸಿರಿಂಜ್​ನಿಂದ 39 ಮಕ್ಕಳಿಗೆ ವ್ಯಾಕ್ಸಿನ್!

88
firstsuddi

ಸಾಗರ್ (ಮಧ್ಯ ಪ್ರದೇಶ): ಒಂದೇ ಸಿರಿಂಜ್ ನಿಂದ 39 ಮಕ್ಕಳಿಗೆ ಕೋವಿಡ್-19 ವ್ಯಾಕ್ಸಿನ್ ನೀಡಿರುವ ಘಟನೆ ಇಲ್ಲಿನ ಖಾಸಗಿ ಶಾಲೆಯೊಂದರಲ್ಲಿ ನಡೆದಿದೆ.

ಸಾಗರ ನಗರದ ಜೈನ್ ಪಬ್ಲಿಕ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ ಶಾಲಾ ಮಕ್ಕಳಿಗೆ ಕೋವಿಡ್ ಲಸಿಕೆ ಶಿಬಿರದ ವೇಳೆ ಈ ಘಟನೆ ನಡೆದಿದೆ. ಇಂಜೆಕ್ಷನ್ ಮಾಡುತ್ತಿರುವವರು ಎಲ್ಲ ಮಕ್ಕಳಿಗೂ ಒಂದೇ ಸಿರಿಂಜ್ ಉಪಯೋಗಿಸುತ್ತಿರುವುದನ್ನು ಕೆಲ ಮಕ್ಕಳ ಪಾಲಕರು ಗಮನಿಸಿ ಆಕ್ಷೇಪವೆತ್ತಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಪಾಲಕರ ಪ್ರತಿಭಟನೆಯ ನಂತರ ಸಾಗರ್ ಇನ್-ಚಾರ್ಜ್ ಕಲೆಕ್ಟರ್ ಕ್ಷಿತಿಜ್ ಸಿಂಘಾಲ್, ಸ್ಥಳಕ್ಕೆ ಜಿಲ್ಲಾ ಮುಖ್ಯ ವೈದ್ಯಾಧಿಕಾರಿ ಮತ್ತು ಆರೋಗ್ಯ ಅಧಿಕಾರಿಯಾಗಿರುವ ಡಾ. ಡಿ ಕೆ ಗೋಸ್ವಾಮಿ ಅವರನ್ನು ಕಳುಹಿಸಿ ಘಟನೆಯ ಪರಿಶೀಲನೆ ಮಾಡುವಂತೆ ಸೂಚಿಸಿದ್ದಾರೆ. ಒಂದೇ ಸಿರಿಂಜ್ ನಿಂದ ವ್ಯಾಕ್ಸಿನ್ ನೀಡಿದ ಆರೋಪಿ ಅಹಿರ್ವಾರ್ ಸ್ಥಳದಿಂದ ಪರಾರಿಯಾಗಿದ್ದು, ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ.

ಭಾರತೀಯ ದಂಡ ಸಂಹಿತೆ ಸೆಕ್ಷನ್ 336 ಅಡಿಯಲ್ಲಿ ಅಹಿರ್ವಾರ್ ವಿರುದ್ಧ ಎಫ್ಐಆರ್ ದಾಖಲಿಸಲಾಗಿದೆ ಎಂದು ಗೋಪಾಲ್ ಗಂಜ್ ಪೊಲೀಸ್ ಠಾಣೆಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಸಿಎಮ್ ಎಚ್ ಒ ವರದಿಯ ಆಧಾರದ ಮೇಲೆ ಜಿಲ್ಲಾ ಲಸಿಕಾ ಅಧಿಕಾರಿ ಡಾ. ರಾಕೇಶ್ ರೋಷನ್ ವಿರುದ್ಧ ಇಲಾಖಾ ತನಿಖೆ ನಡೆಸಿ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿಗಳು ವಿಭಾಗೀಯ ಆಯುಕ್ತರಿಗೆ ಶಿಫಾರಸು ಮಾಡಿದ್ದಾರೆ.