ಕಲಬುರುಗಿ: ಕಲ್ಯಾಣ ಕರ್ನಾಟಕ ಭಾಗವಾದ ಕಲಬುರಗಿಯಲ್ಲಿ ಇಂದು ಸಚಿವ ಸಂಪುಟಸಭೆ ನಡೆಸಲಾಗುತ್ತಿದ್ದು, ಈ ಭಾಗದ ಅಭಿವೃದ್ದಿಗಾಗಿ ಪೂರಕ ಚರ್ಚೆ ಹಾಗೂ ತೀರ್ಮಾನಗಳನ್ನು ಕೈಗೊಳ್ಳಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.
ನಗರದಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಗಾಗಿ ಅಯವ್ಯಯದಲ್ಲಿ ರೂಪಿಸಲಾಗಿರುವ ಯೋಜನೆಗಳು ಹಾಗೂ ಇನ್ನಿತರ ಪ್ರಮುಖ ವಿಷಯಗಳ ಬಗ್ಗೆ ಚರ್ಚಿಸಲಾಗುವುದು. ಕಲ್ಯಾಣ ಕರ್ನಾಟಕದ ಜಿಲ್ಲೆಗಳಲ್ಲಿನ ಜನರಿಗೆ ಉದ್ಯೋಗಾವಕಾಶಗಳ ಬಗ್ಗೆ ಹಾಗೂ ಪ್ರತ್ಯೇಕ ಸಚಿವಾಲಯ ರಚನೆ ಬಗ್ಗೆಯೂ ಚರ್ಚಿಸಲಾಗುವುದು. ಕಾಂಗ್ರೇಸ್ ಸರ್ಕಾರ ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ದಿಯ ಪರವಾಗಿದೆ ಎಂದರು.
ಮನಮೋಹನ್ ಸಿಂಗ್ ನೇತೃತ್ವದ ಕೇಂದ್ರ ಸರ್ಕಾರದ ಅವಧಿಯಲ್ಲಿ 371ನೇ ಕಾನೂನು ತರಲಾಗಿದ್ದು, ಇದಕ್ಕಾಗಿ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಹಾಗೂ ಮಾಜಿ ಮುಖ್ಯಮಂತ್ರಿ ಧರಸಿಂಗ್ ಅವರು ಶ್ರಮವಹಿಸಿದ್ದರು. 2013ರಲ್ಲಿ ಈ ಕಾನೂನನ್ನು ಕರ್ನಾಟಕದಲ್ಲಿ ಜಾರಿಗೆ ತರಲು ಕಾಂಗ್ರೇಸ್ ಸರ್ಕಾರ ಪ್ರಯತ್ನಿಸಿತೇ ಹೊರತು ಜಿಜೆಪಿಯವರಲ್ಲ. ವಾಜಪೇಯಿ ಅವರು ಪ್ರಧಾನಿಯಾಗಿದ್ದ ಸಂಧರ್ಭದಲ್ಲಿ ಕೇಂದ್ರ ಸರ್ಕಾರ ಈ ಕಾನೂನನ್ನು ಜಾರಿಗೆ ತರಲು ತಿರಸ್ಕರಿಸಿದ್ದರು ಎಂದು ಹೇಳಿದರು.
ಕಾಂಗ್ರೆಸ್ ಸರ್ಕಾರದ ಮೇಲೆ ಕಲ್ಯಾಣ ಕರ್ನಾಟಕ ಭಾಗದ ಜನರ ನಿರೀಕ್ಷೆಯಿರುವ ಬಗ್ಗೆ ಪ್ರತಿಕ್ರಿಯಿಸಿ, ಬಡವರ ಪರವಾದ ಸರ್ಕಾರ ನಮ್ಮದು. ಆದ್ದರಿಂದ ಈ ಭಾಗದ ಅಭಿವೃದ್ದಿಗಾಗಿ 5000 ಕೋಟಿ ರೂ ಗಳನ್ನು ನೀಡಲಾಗಿದೆ ಎಂದರು.
ಮಂಡ್ಯ ಜಿಲ್ಲೆಯ ನಾಗಮಂಗಲದ ಗಲಭೆ ಪ್ರಕರಣದ ಸಂಬಂಧ ಮಾತನಾಡಿ, ನಾಗಮಂಗಲ ಶಾಂತವಾಗಿದೆ. ಗಲಭೆ ಪ್ರಕರಣಕ್ಕೆ ಪೊಲೀಸರ ಕರ್ತವ್ಯ ವೈಫಲ್ಯವೇ ಕಾರಣವೆಂದು ಮೇಲ್ನೋಟಕ್ಕೆ ಕಂಡು ಬಂದಿರುವುದರಿಂದ ಸಂಬಂಧಪಟ್ಟ ಡಿವೈಎಸ್‍ಪಿ ಹಾಗೂ ಇನ್ಸ್‍ಪೆಕ್ಟರ್ ರನ್ನು ಅಮಾನತುಗೊಳಿಲಾಗಿದೆ. ಈ ಪ್ರಕರಣದಲ್ಲಿ ಹಾನಿಗೊಳಗಾದ ಅಂಗಡಿ ಮುಂಗಟ್ಟು, ವಾಹನಗಳಿಗೆ ಪರಿಹಾರ ನೀಡುವ ಬಗ್ಗೆ ಕ್ರಮ ವಹಿಸಲಾಗುವುದು ತಿಳಿಸಿದರು.










