ಕಾಂಗ್ರೆಸ್ ಟ್ವೀಟ್​ನಿಂದ ಅಂತರ ಕಾಯ್ದುಕೊಂಡ ವಿಪಕ್ಷ ನಾಯಕ ಸಿದ್ದರಾಮಯ್ಯ.

76
firstsuddi

ಹುಬ್ಬಳ್ಳಿ : ಸಿಎಂ ಬದಲಾವಣೆ ವಿಚಾರದ ಬಗ್ಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರತಿಕ್ರಿಯೆ ನೀಡಿದ್ದು, ಯಡಿಯೂರಪ್ಪ ಬದಲಾವಣೆ ಬಗ್ಗೆ ನನಗೆ ಗೊತ್ತಿತ್ತು. ಅದಕ್ಕೆ ನಾನು ಈ ಹಿಂದೆ ಹೇಳಿದ್ದೆ. ಆದರೆ ಬೊಮ್ಮಾಯಿ ಬದಲಾವಣೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮೂರನೇಯವರಾದ್ರು ಬರಲಿ ನಾಲ್ಕನೇಯವರಾದ್ರೂ ಬರಲಿ. ಸಿಎಂ ಬದಲಾವಣೆಗೂ ನಮಗೂ ಯಾವುದೇ ಸಂಬಂಧವಿಲ್ಲ. ಟ್ವೀಟ್ ಮಾಡಿದವರನ್ನ ಹೋಗಿ ಕೇಳಿ, ನಾನಂತೂ ಟ್ವೀಟ್ ಮಾಡಿಲ್ಲ ಎಂದು ಹೇಳಿದ್ದಾರೆ.

ಕಾಂಗ್ರೆಸ್ ಟ್ವೀಟ್‍ನಲ್ಲೇನಿದೆ?
ರಾಜ್ಯದಲ್ಲಿ ಸಿಎಂ ಬದಲಾವಣೆ ವದಂತಿ ಬಗ್ಗೆ ರಾಜ್ಯ ಕಾಂಗ್ರೆಸ್ ಘಟಕ ನಿನ್ನೆ ಟ್ವೀಟ್ ಮಾಡುವ ಮೂಲಕ ಸಿಎಂ ಬಸವರಾಜ ಬೊಮ್ಮಾಯಿ ಅವರ ಕಾಲೆಳೆದಿದೆ. ಅಮಿತ್ ಶಾ ಬಂದು ಹೋದ ನಂತರ ಬಿಜೆಪಿಯಲ್ಲಿ ಮೋಡ ಕವಿದ ವಾತಾವರಣವಿದೆ. 40 ಪರ್ಸೆಂಟ್ ಸರ್ಕಾರದಲ್ಲಿ ʼ3ನೇ ಸಿಎಂʼ ಸೀಟು ಹತ್ತುವ ಕಾಲ ಸನ್ನಿಹಿತವಾಗಿದೆ. ಗೊಂಬೆ ಬಸವರಾಜ ಬೊಮ್ಮಾಯಿ ಅವರ ಗೊಂಬೆಯಾಟ ಮುಗಿಯುವ ಹಂತಕ್ಕೆ ಬಂದಿದೆ. ಅಮಿತ್ ಶಾ ಅವರ ಭೇಟಿಯ ಬಗ್ಗೆ ಸರ್ಕಾರದ ಯಾವೊಬ್ಬ ಸಚಿವರು ಮಾತಾಡದಿರುವುದು, ಸಂಭ್ರಮವಿಲ್ಲದಿರುವುದೇ ಇದಕ್ಕೆ ನಿದರ್ಶನ ಎಂದು ಕಾಂಗ್ರೆಸ್ ಹೇಳಿದೆ.

ಸಿಎಂ ಬೊಮ್ಮಾಯಿ ಅವರೇ, ಬಿಜೆಪಿಯ ನಕಲಿ ನೋಟ್ ದಂಧೆಕೋರರೊಂದಿಗೆ ನಿಮ್ಮದೇನು ಸಂಬಂಧ? ಸಮಾಜಘಾತುಕರು, ಬಿಟ್ ಕಾಯಿನ್ ದಂಧೆಕೋರರು, 40% ಕಮಿಷನ್ ಗಿರಾಕಿಗಳು, ನೇಮಕಾತಿ ಅಕ್ರಮ ನಡೆಸುವವರು, ನಕಲಿ ನೋಟ್ ದಂಧೆಕೊರರು ಆಡಿಸಿದಂತೆ ಆಡುವ ಬೊಂಬೆ ಸಿಎಂ ಮಾತ್ರವೇ? ಕುರ್ಚಿ ಉಳಿಸಿಕೊಳ್ಳಲು ಈ ಎಲ್ಲಾ ಬಗೆಯ ಭ್ರಷ್ಟರಿಗೆ ಬೆಂಬಲವಾಗಿ ನಿಂತಿದ್ದೀರಾ?

ಎಷ್ಟು ಪ್ರಯತ್ನಿಸಿದರೂ ಜನತಾ ಪರಿವಾರಿಯಾಗಿದ್ದ ಬೊಮ್ಮಾಯಿ ಅವರನ್ನ ಕೇಶವ ಕೃಪಾದವರು ‘ಸಂಘಪರಿವಾರಿ’ಯಾಗಿ ಸ್ವೀಕರಿಸಲು ಒಪ್ಪಲೇ ಇಲ್ಲ! ಆಡಿಸಿ ನೋಡು ಎಂದು ಗೊಂಬೆಯಂತಿದ್ದ ಬೊಂಬೆ ಸಿಎಂ ಬೊಮ್ಮಾಯಿಯವರನ್ನು ಬೀಳಿಸಿ ನೋಡಲು ಹೊರಟಿದೆ ಹೈಕಮಾಂಡ್! ಈ ಬದಲಾವಣೆ ಯತ್ನ ಸರ್ಕಾರದ ವೈಫಲ್ಯಕ್ಕೋ, 3 ಸಿಎಂ ಎಂಬ ನಿಮ್ಮ ಸಂಪ್ರದಾಯಕ್ಕೋ?

ಬೊಮ್ಮಾಯಿಯವರೇ, ಸಿಎಂ ಹುದ್ದೆಗೆ ‘ಕತ್ತಿ ವರಸೆ’ ಶುರುವಾಗಿದೆ ಎಂದರೆ ನೀವು ಕುರ್ಚಿಯಿಂದ ಇಳಿಯಲು ದಿನಗಳನ್ನಲ್ಲ, ಗಂಟೆಗಳನ್ನು ಎಣಿಸುತ್ತಿದ್ದೀರಿ ಎನಿಸುತ್ತಿದೆ! ಬೊಮ್ಮಾಯಿ ಅವರೇ, ಸಿಎಂ ಬದಲಾವಣೆ ಎಂಬ ಬೆಳವಣಿಗೆಗೆ ಕಾರಣವೇನು, ನಿಮ್ಮ ಆಡಳಿತ ವೈಫಲ್ಯವೇ? ಅಥವಾ ಬಿಜೆಪಿ ವರ್ಸಸ್ ಬಿಜೆಪಿ ಕಾದಾಟವೇ? ಅಥವಾ ಯಡಿಯೂರಪ್ಪನವರ ಕೋಪವೇ? ರಾಜ್ಯಕ್ಕೆ ಸಂಕಟ, ಬಿಜೆಪಿಗೆ ಅಧಿಕಾರದಾಟ. ಅತಿವೃಷ್ಟಿಯಿಂದ ಜನತೆ ಪರದಾಡುತ್ತಿರುವಾಗ ಸಮರೋಪಾಧಿಯಲ್ಲಿ ನೆರವಿನ ಕಾರ್ಯ ಮಾಡುವುದನ್ನು ಬಿಟ್ಟು ರಾಜ್ಯ ಬಿಜೆಪಿ ಪಕ್ಷ 3ನೇ ಸಿಎಂ ಪ್ರತಿಷ್ಠಾಪನೆಗೆ ಕಸರತ್ತು ನಡೆಸುತ್ತಿದೆ. ರಾಜ್ಯ ಸಂಕಷ್ಟಕ್ಕೆ ಎದುರಾದಾಗಲೆಲ್ಲ ಬಿಜೆಪಿ ರಾಜಕೀಯದಾಟಕ್ಕೆ ಚಾಲನೆ ಕೊಡುತ್ತದೆ ಎಂದು ಕಾಂಗ್ರೆಸ್ ಬಿಜೆಪಿಯ ಕಾಲೆಳೆದಿದೆ.