ಕಾಡಾನೆ ದಾಳಿಯಿಂದ ಮಹಿಳೆ ಸಾವು.. ಮೃತದೇಹ ನೋಡಲು ಬಂದ ಶಾಸಕನ ಮೇಲೆ ಹಲ್ಲೆ…

97
firstsuddi

ಮೂಡಿಗೆರೆ : ತಾಲೂಕಿನ ಹುಲ್ಲೆಮನೆ ಕುಂದೂರು ಗ್ರಾಮದಲ್ಲಿ ಕಾಡಾನೆ ದಾಳಿಯಿಂದ ಮಹಿಳೆ ಸಾವನ್ನಪ್ಪಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಗ್ರಾಮದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಮಹಿಳೆ ಮೃತದೇಹ ನೋಡಲು ಬಂದ ಮೂಡಿಗೆರೆ ಶಾಸಕ ಎಂ.ಪಿ ಕುಮಾರಸ್ವಾಮಿ ಮೇಲೆ ಗ್ರಾಮಸ್ಥರು ಹಲ್ಲೆ ಮಾಡಿ ಬಟ್ಟೆಯನ್ನೂ ಹರಿದುಹಾಕಿದ್ದಾರೆ ಎನ್ನುವ ಆರೋಪ ಕೇಳಿಬಂದಿದೆ.

ನಿನ್ನೆ ಬೆಳಗ್ಗೆ ತಾಲೂಕಿನ ಹುಲ್ಲೆಮನೆ ಗ್ರಾಮದಲ್ಲಿ ಕಾಡಾನೆ ದಾಳಿಯಿಂದಾಗಿ ಶೋಭಾ ಮೃತಪಟ್ಟಿದ್ದರು. ಘಟನೆ ಬೆಳಗ್ಗೆ ನಡೆದಿದ್ದರೂ ಕ್ಷೇತ್ರದ ಶಾಸಕ ಎಂ.ಪಿ.ಕುಮಾರಸ್ವಾಮಿ ಸಂಜೆ ಗ್ರಾಮಕ್ಕೆ ಬಂದಿದ್ದಾರೆ. ಈ ವೇಳೆ ಗ್ರಾಮಸ್ಥರು ಆಕ್ರೋಶಗೊಂಡು ಶಾಸಕ ಕುಮಾರಸ್ವಾಮಿ ಅವರಿಗೆ ಘೇರಾವ್ ಹಾಕಿದ್ದಾರೆ. ಅಲ್ಲದೇ ತೀವ್ರ ಅಕ್ರೋಶಗೊಂಡಿದ್ದ ಕೆಲ ಗ್ರಾಮಸ್ಥರು ಅವಾಚ್ಯ ಶಬ್ಧಗಳಿಂದ ನಿಂದಿಸಿದಲ್ಲದೇ ಶಾಸಕರನ್ನು ಹಿಡಿದು ಎಳೆದಾಡಿದ್ದಾರೆ. ಈ ವೇಳೆ ಉದ್ರಿಕ್ತಗೊಂಡ ಗ್ರಾಮಸ್ಥರನ್ನು ನಿಯಂತ್ರಿಸಲು ಪೊಲೀಸರು ಹರಸಾಹಸಪಟ್ಟಿದ್ದು, ಪರಿಸ್ಥಿತಿ ಕೈ ಮೀರಿದ ವೇಳೆ ಲಾಠಿ ಚಾರ್ಜ್ ಮಾಡಿ ಶಾಸಕರನ್ನು ಕರೆದುಕೊಂಡು ಬಂದ ಕಾರಿನಲ್ಲಿ ಕೂರಿಸಿದ್ದಾರೆ.

ಹರಿದ ಬಟ್ಟೆಯಲ್ಲೇ ಹೇಳಿಕೆ ನೀಡಿರುವ ಶಾಸಕ ಎಂ.ಪಿ ಕುಮಾರಸ್ವಾಮಿ, ಇದರಲ್ಲಿ ಬೇಕು ಅಂತ ಕೆಲವರು ಗುಂಪು ಮಾಡಿಕೊಂಡು ಹಲ್ಲೆ ಮಾಡಿದ್ದಾರೆ. ಶಾಸಕರು ಆನೆ ಸಾಕಿದ್ದಾರೆ ಎಂದು ಜನ ಹೊಡೆದು ಕಳುಹಿಸಿದ್ದಾರೆ. ಸಂಚು ಮಾಡಿ ಹಲ್ಲೆ ಮಾಡಿದ್ರು. ನನ್ನನ್ನು ರಕ್ಷಿಸುವಲ್ಲಿ ಪೊಲೀಸರು ವಿಫಲರಾಗಿದ್ದಾರೆ. ನಾನು ಅಲ್ಲೇ ಇರ್ತಿದ್ದೆ ಪೊಲೀಸರು ಮಿಸ್ ಗೈಡ್ ಮಾಡಿ ಹೊರಗೆ ಕಳುಹಿಸಿದ್ರು. ಸಾರ್ವಜನಿಕರ ಸೇವೆ ಮಾಡಲು ಇರೋರು ನಾವು. ಎಲ್ಲ ತಾಗ್ಯಕ್ಕೂ ರೆಡಿ ಇರ್ತೀವಿ. ಆ ಜಾಗ ಬಿಟ್ಟು ಕದಲ್ತಾ ಇರ್ಲಿಲ್ಲ ಎಂದು ತಿಳಿಸಿದ್ದಾರೆ.