ಕಾಫಿ ಪ್ರಿಯರಿಗೆ ಶಾಕ್: ಒಂದು ಕಪ್ ಕಾಫಿ ಬೆಲೆ 5 ರೂಪಾಯಿ ಏರಿಕೆ ಸಾಧ್ಯತೆ.

34

ಬೆಂಗಳೂರು: ಕಾಫಿ ಪ್ರಿಯರಿಗೆ ಬಿಸಿ ಕಾಫಿ ನಿಮ್ಮ ನಾಲಿಗೆಯನಷ್ಟೇ ಅಲ್ಲ, ಜೇಬನ್ನು ಸುಡುತ್ತದೆ. ಏಕೆಂದರೆ ಒಂದು ಕಪ್ ಕಾಫಿಯ ಬೆಲೆ ಐದು ರೂಪಾಯಿಗಳಷ್ಟು ಹೆಚ್ಚಾಗುವ ಸಾಧ್ಯತೆ ಇದೆ. ಕಾಫಿ ಪುಡಿಯ ಬೆಲೆ ಏರಿಕೆಯಾಗುತ್ತಿರುವುದೇ ಇದಕ್ಕೆ ಮುಖ್ಯ ಕಾರಣ ಎಂದು ವರದಿಯಾಗಿದೆ. ರೋಸ್ಟರ್‍ಗಳು ಮಾರಾಟ ಮಾಡುವ ಹುರಿದ ಕಾಫಿ ಪುಡಿಯ ಬೆಲೆ ಫೆಬ್ರವರಿ ಅಂತ್ಯದ ವೇಳೆಗೆ ಪ್ರತಿ ಕೆಜಿಗೆ 100 ರೂಪಾಯಿಗಳಷ್ಟು ಏರಿಕೆಯಾಗುತ್ತದೆ ಮತ್ತು ಮಾರ್ಚ್ ಅಂತ್ಯದ ವೇಳೆಗೆ ಮತ್ತೆ ಕೆಜಿಗೆ 100 ರೂಪಾಯಿಗಳಷ್ಟು ಏರಿಕೆಯಾಗುತ್ತದೆ. ಇಂಡಿಯನ್ ಕಾಫಿ ರೋಸ್ಟರ್ಸ್ ಅಸೋಸಿಯೇಷನ್ ಮತ್ತು ಕಾಫಿ ಮಂಡಳಿಯ ಅಧಿಕಾರಿಗಳ ಸದಸ್ಯರು ಬೆಲೆ ಏರಿಕೆ ಅನಿವಾರ್ಯ ಎಂದು ಹೇಳಿರುವುದಾಗಿ ತಿಳಿಸಲಾಗಿದೆ. ಪ್ರಸಕ್ತ ಹಣಕಾಸು ವರ್ಷದಲ್ಲಿ ಇದು 2ನೇ ಬೆಲೆ ಏರಿಕೆಯಾಗಿದೆ. ಅಂತರರಾಷ್ಟ್ರೀಯ ಕಾಫಿ ಮಾರುಕಟ್ಟೆಯಲ್ಲಿನ ಏರಿಳಿತಗಳಿಂದಾಗಿ ಬೆಲೆ ಏರಿಕೆ ಅನಿವಾರ್ಯ ಎಂದು ಕಾಫಿ ಮಂಡಳಿಯ ಮೂಲಗಳು ತಿಳಿಸಿವೆ. ಪ್ರತಿ ಕೆಜಿ ಕಾಫಿ ಪುಡಿಯ ಬೆಲೆ 800 ರಿಂದ 850 ರೂಪಾಯಿಗಳಿಂದ 1000, 1100 ರೂಪಾಯಿಗಳಿಗೆ ಹೆಚ್ಚಳವಾದಾಗ, ಕಾಫಿ ಮಾರಾಟಗಾರರಿಗೆ ಒಂದು ಕಪ್ ಕಾಫಿಯ ಬೆಲೆಯನ್ನು ಸುಮಾರು 5 ರೂಪಾಯಿಗಳಷ್ಟು ಹೆಚ್ಚಿಸುವುದನ್ನು ಬಿಟ್ಟು ಬೇರೆ ದಾರಿಯಿಲ್ಲ. ಚಿಕೋರಿ ಮಿಶ್ರಣವು ಗುಣಮಟ್ಟ ಮತ್ತು ಸುವಾಸನೆಯ ಮೇಲೆ ಪರಿಣಾಮ ಬೀರುವುದರಿಂದ ನಾವು ಅದರ ಪ್ರಮಾಣ ಹೆಚ್ಚಿಸಲು ಸಾಧ್ಯವಿಲ್ಲ ಎಂದು ಅಸೋಸಿಯೇಷನ್ ಅಧ್ಯಕ್ಷ ಪೆರಿಕಲ್ ಎಂ. ಸುಂದರ್ ತಿಳಿಸಿರುವುದಾಗಿ ವರದಿ ಉಲ್ಲೇಖಿಸಿದೆ.