ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಶವ ಪತ್ತೆ ಪ್ರಕರಣಕ್ಕೆ ಬಿಗ್ ಟ್ವಿಸ್ಟ್: ದರೋಡೆಕೋರರಿಂದ ಕೊಲೆಯಾದ ಮೂವರು…

51
firstsuddi

ತುಮಕೂರು: ತಾಲೂಕಿನ ಕುಚ್ಚಂಗಿ ಕೆರೆಯ ಬಳಿ ಕಾರಿನಲ್ಲಿ ಸುಟ್ಟ ಸ್ಥಿತಿಯಲ್ಲಿ ಮೂವರ ಶವ ಪತ್ತೆಯಾದ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ ಸಿಕ್ಕಿದೆ. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ಮೂಲದ ಮೂವರು ಚಿನ್ನದ ಆಸೆಗೆ ಬಿದ್ದು ತುಮಕೂರಿಗೆ ಹೋಗಿ ದರೋಡೆಕೋರರಿಂದ ಕೊಲೆಯಾದರು ಎನ್ನುವ ವಿಚಾರ ಬೆಳಕಿಗೆ ಬಂದಿದೆ.

ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ಮೂಲದ ಇಸಾಕ್ (56), ಸಾಹುಲ್ (45) ಮತ್ತು ಇಮ್ತಿಯಾಜ್ (34) ಹತ್ಯೆಯಾದವರಾಗಿದ್ದಾರೆ. ಇದರಲ್ಲಿ ಸಾಹುಲ್ ಹಮೀದ್, ಬೆಳ್ತಂಗಡಿ ತಾಲೂಕಿನ ನಡ ಗ್ರಾಮದ ಟಿ.ಬಿ.ಕ್ರಾನ್ ನಿವಾಸಿಯಾಗಿದ್ದು, ಆಟೋ ಚಾಲಕನಾಗಿ ಕೆಲಸ ಮಾಡುತ್ತಿದ್ದ. ಇಸಾಕ್ ಕುವೆಟ್ಟು ಗ್ರಾಮದ ಮದಡ್ಕ ನಿವಾಸಿ ಮತ್ತು ಸಿದ್ದಿಕ್ ಶಿರ್ಲಾಲು ಗ್ರಾಮದ ನಿವಾಸಿ ಎಂದು ತಿಳಿದು ಬಂದಿದೆ.

ಈ ಮೂವರು 12 ದಿನಗಳ ಹಿಂದೆ ದಕ್ಷಿಣ ಕನ್ನಡದ ಮದಡ್ಕದ ರಫೀಕ್ ಎಂಬವರ ಎಸ್ ಪ್ರೆಸ್ಸೊ ಕಾರನ್ನು ಬಾಡಿಗೆ ಪಡೆದುಕೊಂಡು ತುಮಕೂರಿಗೆ ಆಗಮಿಸಿದ್ದರು. ನಮ್ಮ ಜಾಗದಲ್ಲಿ ಕೃಷಿ ಮಾಡುವಾಗ ಚಿನ್ನದ ಹಂಡೆ ಸಿಕ್ಕಿದೆ, ಕಡಿಮೆ ಬೆಲೆಗೆ ಚಿನ್ನವನ್ನು ನೀಡುತ್ತೇವೆ ಎಂದು ದುಷ್ಕರ್ಮಿಗಳು ಸುಳ್ಳು ಹೇಳಿ ಹಣ ದೋಚುವ ಪ್ಲಾನ್ ಮಾಡಿ ಈ ಮೂವರನ್ನು ಕರೆಸಿಕೊಂಡಿದ್ದರು. ಬಳಿಕ ಕೈಕಾಲು ಕಟ್ಟಿ ಹಾಕಿ ಕಾರಿಗೆ ಬೆಂಕಿ ಹಚ್ಚಿ ಕೊಲೆ ಮಾಡಿದ್ದಾರೆ ಎಂದು ಹೇಳಲಾಗಿದೆ.

ಘಟನೆ ಸಂಬಂಧ ಸುಮೊಟೋ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿರುವ ಪೊಲೀಸರು, ಮೂವರ ಮೃತದೇಹಗಳನ್ನು ಡಿಎನ್ಎ ಪರೀಕ್ಷೆಗೆ ಒಳಪಡಿಸಿ ಬಳಿಕ ಸಂಬಂಧಿಕರಿಗೆ ಶವ ಹಸ್ತಾಂತರಿಸಿದ್ದಾರೆ.