ಭುವನೇಶ್ವರ್ : ಕಾಲಿಗೆ ಕ್ಯಾಮೆರಾ ಮತ್ತು ಮೈಕ್ರೋಚಿಪ್ ಅವಳವಡಿಸಿದ್ದ ಪಾರಿವಾಳವನ್ನು ಒಡಿಶಾದ ಜಗತ್‍ಸಿಂಗ್‍ಪುರ ಜಿಲ್ಲೆಯ ಪರದೀಪ್ ಕರಾವಳಿಯಲ್ಲಿ ಸೆರೆ ಹಿಡಿಯಲಾಗಿದೆ.
ಪಾರಿವಾಳದ ರೆಕ್ಕೆಗಳ ಮೇಲೆ ಅನ್ಯ ಭಾಷೆಯಲ್ಲಿ ಕೆಲವೊಂದು ಬರಹಗಳನ್ನು ಬರೆದಿದ್ದಾರೆ ಎಂದು ವರದಿಯಾಗಿದೆ. ಈ ಪಾರಿವಾಳವನ್ನು ಬೇಹುಗಾರಿಕೆಗೆ ಬಳಸಿಕೊಳ್ಳಲಾಗಿದೆ ಎಂದು ಪೊಲೀಸರು ಶಂಕೆ ವ್ಯಕ್ತಪಡಿಸಿದ್ದಾರೆ.
ಕೆಲವು ದಿನಗಳ ಹಿಂದೆ ಒಡಿಶಾದ ಜಗತ್‍ಸಿಂಗ್‍ಪುರ ಜಿಲ್ಲೆಯ ಪರದೀಪ್ ಕರಾವಳಿಯಲ್ಲಿ ಮೀನುಗಾರರು ಸಮುದ್ರದಲ್ಲಿ ಮೀನುಗಾರಿಕೆ ನಡೆಸುತ್ತಿದ್ದರು. ಈ ವೇಳೆ ಆ ಮೀನುಗಾರರ ದೋಣಿಯ ಮೇಲೆ ಒಂದು ಪಾರಿವಾಳ ಕುಳಿತಿರುವುದನ್ನು ಮೀನುಗಾರರು ಗಮನಿಸಿದ್ದಾರೆ. ಅಷ್ಟೇ ಅಲ್ಲದೇ ಆ ಪಾರಿವಾಳದ ಕಾಲಿನಲ್ಲಿದ್ದ ಸಾಧನ ಮತ್ತು ರೆಕ್ಕೆಯ ಮೇಲೆ ಬರೆದಿದ್ದ ಬರಹವನ್ನು ಗಮನಿಸಿದ್ದಾರೆ. ಈ ಹಿನ್ನೆಲೆಯಲ್ಲಿ ತಕ್ಷಣ ಎಚ್ಚೆತ್ತುಕೊಂಡ ಮೀನುಗಾರರು ತಮ್ಮ ಟ್ರಾಲರ್ ನಲ್ಲಿ ಪಾರಿವಾಳವನ್ನು ಸೆರೆ ಹಿಡಿದರು. ನಂತರ ಅದನ್ನು ಮೆರೈನ್ ಪೊಲೀಸರಿಗೆ ಒಪ್ಪಿಸಿದ್ದಾರೆ.
ಪೊಲೀಸರು ತನಿಖೆಯನ್ನು ಪ್ರಾರಂಭಿಸಿದ್ದಾರೆ. ಈ ಬಗ್ಗೆ ಜಗತ್‍ಸಿಂಗ್‍ಪುರ ಪೊಲೀಸ್ ವರಿಷ್ಠಾಧಿಕಾರಿ ರಾಹುಲ್ ಪಿಆರ್ ಮಾತನಾಡಿ, ಪಶುವೈದ್ಯರು ಪಾರಿವಾಳವನ್ನು ಪರೀಕ್ಷಿಸುತ್ತಿದ್ದಾರೆ. ಅದರ ಕಾಲುಗಳಿಗೆ ಜೋಡಿಸಲಾದ ಸಾಧನಗಳನ್ನು ಪರೀಕ್ಷಿಸಲು ರಾಜ್ಯ ವಿಧಿವಿಜ್ಞಾನ ಪ್ರಯೋಗಾಯಲಯದ ಸಹಾಯವನ್ನು ಪಡೆಯುತ್ತೇವೆ ಎಂದು ತಿಳಿಸಿದರು.










