ಢಾಕಾ : ದೇವಾಲಯಕ್ಕೆ ನುಗ್ಗಿ ಕಾಳಿ ದೇವಿಯ ವಿಗ್ರಹವನ್ನು ದುಷ್ಕರ್ಮಿಗಳು ಧ್ವಂಸಗೊಳಿಸಿದ್ದಾರೆ. ಬಾಂಗ್ಲಾದೇಶದ ಜೆನೈದಾದಲ್ಲಿರುವ ದೌತಿಯಾ ಗ್ರಾಮದ ಕಾಳಿ ದೇವಸ್ಥಾನದ ವಿಗ್ರಹವನ್ನು ದುಷ್ಕರ್ಮಿಗಳು ತುಂಡು ತುಂಡು ಮಾಡಿದ್ದು, ವಿಗ್ರಹದ ರುಂಡ ದೇವಸ್ಥಾನದಿಂದ ಸುಮಾರು ಅರ್ಧ ಕಿ.ಮೀ ದೂರದಲ್ಲಿ ಪತ್ತೆಯಾಗಿದೆ.
ಈ ಬಗ್ಗೆ ದೇಗುಲ ಸಮಿತಿಯ ಅಧ್ಯಕ್ಷ ಸುಕುಮಾರ್ ಕುಂದಾ ಸ್ಥಳೀಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ಪಡೆದಕೊಂಡ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಬಾಂಗ್ಲಾದೇಶದಲ್ಲಿ ಹತ್ತು ದಿನಗಳ ಕಾಲ ನಡೆಯುವ ದುರ್ಗಾ ಪೂಜಾ ಉತ್ಸವ ಮುಗಿದ ಒಂದು ದಿನದ ನಂತರ ಈ ಘಟನೆ ನಡೆದಿದೆ.
ಪ್ರಕರಣನ್ನು ದಾಖಲಿಸಿಕೊಳ್ಳಲಾಗಿದೆ ಮತ್ತು ದುಷ್ಕರ್ಮಿಗಳ ಪತ್ತೆಗೆ ಜಾಲ ಬೀಸಲಾಗಿದೆ, ಈ ಘಟನೆಯೊಂದನ್ನು ಬಿಟ್ಟರೆ ಈ ವರ್ಷದ ದುರ್ಗಾ ಪೂಜಾ ಹಬ್ಬದ ಆಚರಣೆ ಶಾಂತಿಯುತವಾಗಿ ನಡೆದಿದೆ ಎಂದು ಜೆನೈದಾ ಜಿಲ್ಲೆಯ ಸಹಾಯಕ ಪೊಲೀಸ್ ವರಿಷ್ಠಾಧಿಕಾರಿ ಅಮಿತ್ ಬರ್ಮನ್ ಹೇಳಿದ್ದಾರೆ.










