ಕೃಷಿ ಪಂಪ್‌ಸೆಟ್‌ಗಳಿಗೆ ಪ್ರತಿದಿನ 7 ತಾಸು ವಿದ್ಯುತ್ ಸರಬರಾಜು: ಸಿಎಂ ಸಿದ್ದರಾಮಯ್ಯ.

54
firstsuddi

ಬೆಂಗಳೂರು: ರಾಜ್ಯದಲ್ಲಿ ನೀರಾವರಿ ಪಂಪ್‌ಸೆಟ್‌ಗಳಿಗೆ 7 ಗಂಟೆಗಳ ವಿದ್ಯುತ್ ಸರಬರಾಜು ಮಾಡಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು.

ಇಂದು ಸಿದ್ದರಾಮಯ್ಯ ಅವರು ಗೃಹ ಕಚೇರಿ ಕೃಷ್ಣಾದಲ್ಲಿ ಇಂಧನ ಇಲಾಖೆಯ ಅಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿದರು. ಸಿದ್ದರಾಮಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಇಂಧನ ಸಚಿವ ಕೆ.ಜೆ ಜಾರ್ಜ್, ಮುಖ್ಯಮಂತ್ರಿಯವರ ರಾಜಕೀಯ ಕಾರ್ಯದರ್ಶಿ ನಜೀರ್ ಅಹ್ಮದ್ ಸೇರಿದಂತೆ ವಿವಿಧ ಇಲಾಖೆಗಳ ಹಿರಿಯ ಅಧಿಕಾರಿಗಳು ಭಾಗವಹಿಸಿದ್ದರು. ಸಭೆಯಲ್ಲಿ ಮಳೆ ಅಭಾವದಿಂದ ರಾಜ್ಯದಲ್ಲಿ ಉಂಟಾಗಿರುವ ವಿದ್ಯುತ್ ಸಮಸ್ಯೆ ಬಗ್ಗೆ ಸುದೀರ್ಘವಾಗಿ ಚರ್ಚಿಸಲಾಯಿತು.

ರಾಜ್ಯದಲ್ಲಿ ವಿದ್ಯುತ್ ಕೊರತೆಯಿದೆ ಎಂದು ನೀರಾವರಿ ಪಂಪ್‌ಸೆಟ್‌ಗಳಿಗೆ ಏಳು ಗಂಟೆಗಳ ಕಾಲ ವಿದ್ಯುತ್ ನೀಡಲು ಮೊದಲೇ ಘೋಷಣೆ ಮಾಡಿದ್ದೆವು. ಕೆಲವು ಜನ ಸತತವಾಗಿ ಮೂರು ಫೇಸ್‍ನಲ್ಲಿ 5 ಗಂಟೆ ವಿದ್ಯುತ್ ನೀಡಿದರೆ ಸಾಕು ಎಂದಿದ್ದರು. ಅದಕ್ಕಾಗಿ 5 ಗಂಟೆಗಳ ಕಾಲ 3 ಫೇಸ್‍ನಲ್ಲಿ ವಿದ್ಯುತ್ ನೀಡುವಂತೆ ಸೂಚನೆ ನೀಡಲಾಗಿತ್ತು. ರಾಯಚೂರು, ಕೊಪ್ಪಳ, ಬಳ್ಳಾರಿ, ಯಾದಗಿರಿ ರೈತರು ಭೇಟಿ ಮಾಡಿ ಭತ್ತ ಬೆಳೆಯುವುದರಿಂದ 5 ಗಂಟೆಗಳ ಕಾಲ ವಿದ್ಯುತ್ ನೀಡುವುದು ಸಾಕಾಗುವುದಿಲ್ಲ, 7 ಗಂಟೆಗಳ ಕಾಲ ನೀಡಬೇಕೆಂದು ಮನವಿ ಮಾಡಿದರು. ಕಬ್ಬು ಹಾಗೂ ಭತ್ತ ಕಟಾವಿಗೆ ಬಂದಿರುವುದರಿಂದ ಈ ಭಾಗದಲ್ಲಿ 7 ಗಂಟೆಗಳ ಕಾಲ ವಿದ್ಯುತ್ ನೀಡಬೇಕು ಎಂದು ಸೂಚನೆ ನೀಡಲಾಗಿದೆ. ಉಳಿದ ಭಾಗಗಳಿಗೆ ನೀಡುತ್ತಿದ್ದ 5 ಗಂಟೆಗಳ ವಿದ್ಯುತ್ ನ್ನು 7 ಗಂಟೆಗಳ ಕಾಲ ನೀಡಲು ಸಾಧ್ಯವಾಗುತ್ತದೆ ಎಂದು ಇಂದಿನ ಸಭೆಯಲ್ಲಿ ಅಭಿಪ್ರಾಯಕ್ಕೆ ಬರಲಾಗಿದೆ ಎಂದರು.

ವಿದ್ಯುತ್ ಉತ್ಪಾದನೆಯಲ್ಲಿ ಹೆಚ್ಚಳ:-
ರಾಯಚೂರು, ಬಳ್ಳಾರಿಯಲ್ಲಿ ಥರ್ಮಲ್ ಘಟಕಗಳಿದ್ದು, ರಾಜ್ಯದಲ್ಲಿ ಥರ್ಮಲ್, ಜಲವಿದ್ಯುತ್, ಸೋಲಾರ್ ಮೂಲಕ ವಿದ್ಯುತ್ ಉತ್ಪಾದಿಸುತ್ತಿದ್ದು. ಥರ್ಮಲ್ ಘಟಕವು 1000 ಮೆಗಾ ವ್ಯಾಟ್ ಉತ್ಪಾದಿಸುತ್ತಿದೆ. ಸುಮಾರು 2400 ರಿಂದ 3200 ಮೆ.ವ್ಯಾ, ವಿದ್ಯುತ್ ಉತ್ಪಾದನೆ ಹೆಚ್ಚಾಗಿದೆ. ಕಬ್ಬು ಅರೆಯುವುದು ಪ್ರಾರಂಭವಾಗಿ ಕೋ-ಜನರೇಷನ್ ಆಗಿರುವುದರಿಂದ 450 ಮೆ.ವ್ಯಾಟ್ ಉತ್ಪಾದನೆಯಾಗಿದೆ. ಕೂಡ್ಲಗಿಯಲ್ಲಿ 150 ಮೆ.ವ್ಯಾ ಕರ್ನಾಟಕಕ್ಕೆ ಉಳಿತಾಯವಾಗಲಿದೆ ಹಾಗೂ ಖರೀದಿ ಮಾಡುತ್ತಿರುವುದರಿಂದ ಹೆಚ್ಚು ವಿದ್ಯುತ್ ದೊರೆಯಲಿದೆ. ಹಾಗಾಗಿ ಇಂದಿನಿಂದ 7 ತಾಸು ವಿದ್ಯುತ್‍ನ್ನು ಪಂಪ್‍ಸೆಟ್‍ಗಳಿಗೆ ನೀಡುತ್ತಿದ್ದೇವೆ. ಕೈಗಾರಿಕೆಗಳಿಗೆ, ಗೃಹಬಳಕೆಗೆ ವಿದ್ಯುತ್ ಕಡಿತ ಮಾಡಲಾಗುತ್ತಿಲ್ಲ. ಪಂಪ್‍ಸೆಟ್‍ಗಳಿಗೆ ನೀಡುವ ವಿದ್ಯುತ್ ಸಹಾಯಧನವನ್ನು ಸರ್ಕಾರವೇ ನೀಡಿದೆ. 13100 ಕೋಟಿ ರೂ.ಗಳನ್ನು ಬಜೆಟ್‍ನಲ್ಲಿ ಒದಗಿಸಲಾಗಿದೆ ಎಂದರು.