ಕೆಪಿಟಿಸಿಎಲ್ ಪರೀಕ್ಷೆ ಅಕ್ರಮ ಪ್ರಕರಣ : ಮತ್ತೆ ಮೂವರ ಬಂಧನ…

51
firstsuddi

ಬೆಳಗಾವಿ: ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಮತ್ತೆ ಮೂವರು ಆರೋಪಿಗಳನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.

ಕಳೆದ ತಿಂಗಳು ಆಗಸ್ಟ್.07ರಂದು ಗೋಕಾಕ್ ನಗರದಲ್ಲಿ ನಡೆದಿದ್ದ ಕೆಪಿಟಿಸಿಎಲ್ ನೇಮಕಾತಿ ಪರೀಕ್ಷೆ ಅಕ್ರಮ ಪ್ರಕರಣ ಸಂಬಂಧ ಈಗಾಗಲೇ 17 ಆರೋಪಿಗಳನ್ನು ಬಂಧಿಸಿದ್ದರು. ಬಳಿಕ ತನಿಖೆ ತೀವ್ರಗೊಳಿಸಿದ ಪೊಲೀಸರು ಮತ್ತೆ ಮೂವರು ಆರೋಪಿಗಳನ್ನು ಬಂಧಿಸಿದ್ದು, ಬಂಧಿತರ ಸಂಖ್ಯೆ 20ಕ್ಕೆ ಏರಿಕೆಯಾಗಿದೆ. ಗೋಕಾಕ್ ತಾಲೂಕಿನ ಅರಭಾವಿ ಪಟ್ಟಣದ ಅಕ್ಷಯ್ ದುಂದಪ್ಪ ಭಂಡಾರಿ (33), ಬೀರಣಗಡ್ಡಿ ಗ್ರಾಮದ ಬಸವರಾಜ ರುದ್ರಪ್ಪ ದುಂದನಟಿ (34), ರಾಜಾಪೂರ ಗ್ರಾಮದ ಶ್ರೀಧರ ಲಕ್ಕಪ್ಪ ಕಟ್ಟಿಕಾರ್ (22) ಬಂಧಿತ ಆರೋಪಿಗಳು.

ಬಂಧಿತರ ಪೈಕಿ ಅಕ್ಷಯ್ ಮತ್ತು ಶ್ರೀಧರ ಇಬ್ಬರು ಆರೋಪಿಗಳು ಪರೀಕ್ಷಾರ್ಥಿಗಳಿಗೆ ಇಲೆಕ್ಟ್ರಾನಿಕ್ ಡಿವೈಸ್ ಕೊಟ್ಟ ಆರೋಪವಿದೆ. ಬೆಂಗಳೂರಿನಿಂದ ಇಲೆಕ್ಟ್ರಾನಿಕ್ ಡಿವೈಸ್ ನ್ನು ಪ್ರಕರಣದ ಪ್ರಮುಖ ಆರೋಪಿ ಸಂಜು ಭಂಡಾರಿ ತಂದು ಕೊಟ್ಟಿದ್ದಾರೆ. ಮತ್ತೊಬ್ಬ ಆರೋಪಿ ಬಸವರಾಜ ಪರೀಕ್ಷಾ ಅಭ್ಯರ್ಥಿಗಳಿಗೆ ಪ್ರಶ್ನೆ ಪತ್ರಿಕೆಗಳಿಗೆ ಉತ್ತರ ಹೇಳಿದ ಆರೋಪವಿದೆ. ಬಂಧಿತರಿಂದ ಮೊಬೈಲ್ ಮತ್ತು 50 ಖಾಲಿ ಇಲೆಕ್ಟ್ರಾನಿಕ್ ಡಿವೈಸ್, 18 ಇಲೆಕ್ಟ್ರಾನಿಕ್ ಡಿವೈಸ್, ಒಂದು ಮೋಟಾರ್ ಸೈಕಲ್ ಜಪ್ತಿ ಮಾಡಿಕೊಳ್ಳಲಾಗಿದೆ. ಸದ್ಯ ಬಂಧಿತ ಮೂವರು ಆರೋಪಿಗಳು ನ್ಯಾಯಾಂಗ ಬಂಧನದಲ್ಲಿದ್ದಾರೆ.