ಕೆಲಸಕ್ಕಾಗಿ ಭೂಮಿ ಹಗರಣ : ಸಿಬಿಐನಿಂದ ಲಾಲು ಪ್ರಸಾದ್ ಯಾದವ್ ವಿಚಾರಣೆ…

42
firstsuddi

ನವದೆಹಲಿ : ಕೆಲಸಕ್ಕಾಗಿ ಭೂಮಿ ಹಗರಣದ ಆರೋಪಕ್ಕೆ ಸಂಬಂಧಿಸಿದಂತೆ ಬಿಹಾರದ ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ ಯಾದವ್ ಅವರನ್ನು ಸಿಬಿಐ ವಿಚಾರಣೆಗೆ ಒಳಪಡಿಸಿದೆ.

ಲಾಲು ಪುತ್ರಿ ಮಿಸಾ ಭಾರತಿ ಅವರ ಪಂಡರಪರಾಕ್ ನಿವಾಸದಲ್ಲಿ ವಿಚಾರಣೆ ನಡೆಯುತ್ತಿದೆ. ಮಿಸಾ ಭಾರತಿ ರಾಜ್ಯಸಭಾ ಸದಸ್ಯೆಯಾಗಿದ್ದಾರೆ. ತನಿಖೆಗೆ ಸಹಕರಿಸುವುದಾಗಿ ಲಾಲು ಯಾದವ್ ಕುಟುಂಬದವರು ಹೇಳಿದ್ದಾರೆ.

ನಿನ್ನೆ ಪಾಟ್ನಾದಲ್ಲಿರುವ ಮಾಜಿ ಸಿಎಂ ಮತ್ತು ಲಾಲೂ ಯಾದವ್ ಪತ್ನಿ ರಾಬ್ರಿದೇವಿ ನಿವಾಸದ ಮೇಲೆ ದಾಳಿ ನಡೆಸಿದ್ದ ಅಧಿಕಾರಿಗಳು ಅವರನ್ನು ಸುದೀರ್ಘ ವಿಚಾರಣೆಗೆ ಒಳಪಡಿಸಿದ್ದರು.

ಲಾಲು ಪ್ರಸಾದ್ ಯಾದವ್ ಅವರು 2004 ಮತ್ತು 2009ರ ನಡುವೆ ರೈಲ್ವೆ ಸಚಿವರಾಗಿದ್ದ ಸಂದರ್ಭದಲ್ಲಿ, ಅವರು ಮತ್ತು ಅವರ ಕುಟುಂಬದವರು ಉದ್ಯೋಗಗಳನ್ನು ನೀಡಲು ಅದಕ್ಕೆ ಪ್ರತಿಯಾಗಿ ಕಡಿಮೆ ದರದಲ್ಲಿ ಜಮೀನುಗಳನ್ನು ಖರೀದಿಸಿದ್ದರು ಎಂದು ಆರೋಪಿಸಲಾಗಿದೆ.

ಈ ಪ್ರಕರಣದಲ್ಲಿ ಲಾಲು ಪ್ರಸಾದ್ ಯಾದವ್ ಮತ್ತು ಅವರ ಪತ್ನಿ ರಾಬ್ರಿ ದೇವಿ ಹಾಗೂ ಮತ್ತಿತರ 14 ಮಂದಿ ವಿರುದ್ಧ ಕ್ರಿಮಿನಲ್ ಪಿತೂರಿ ಮತ್ತು ಭ್ರಷ್ಟಾಚಾರ ತಡೆ ಕಾಯ್ದೆ ನಿಬಂಧನೆಯಡಿ ಸಿಬಿಐ ಈಗಾಗಲೇ ಚಾರ್ಜ್ ಶೀಟ್ ಸಲ್ಲಿಸಿದೆ. ಫೆಬ್ರವರಿ 27 ರಂದು ಆರೋಪಿಗಳಿಗೆ ನ್ಯಾಯಾಲಯವು ಸಮನ್ಸ್ ನೀಡಿದ್ದು, ಮಾರ್ಚ್ 15 ರಂದು ನ್ಯಾಯಾಲಯಕ್ಕೆ ಹಾಜರಾಗುವಂತೆ ಸೂಚಿಸಿದೆ.