ಮೂಡಿಗೆರೆ : ಕೊಟ್ಟಿಗೆಹಾರದಿಂದ ಗಂಗಾಮೂಲ ರಸ್ತೆ ಹಾಗೂ ಕೊಟ್ಟಿಗೆಹಾರದಿಂದ ಕಳಸ ರಸ್ತೆಗಳು ಅಪಘಾತಗಳ ತಾಣಗಳಾಗಿ ಮಾರ್ಪಟ್ಟಿವೆ. ರಸ್ತೆಯುದ್ದಕ್ಕೂ ಗಿಡಗಂಟಿಗಳು ಹೆದ್ದಾರಿಗೆ ಚಾಚಿಕೊಂಡಿದ್ದು ಮುಂಭಾಗದಿಂದ ಬರುವ ವಾಹನಗಳು ಕಾಣಿಸದ ಕಾರಣ ದಿನನಿತ್ಯ ಅಪಘಾತಗಳು ಸಂಭವಿಸುತ್ತಿವೆ.
ಕೊಟ್ಟಿಗೆಹಾರ ಗಂಗಾಮೂಲ ರಸ್ತೆಗೆ ನಿರ್ವಾಹಣಾ ವೆಚ್ಚವಾಗಿ 50 ಲಕ್ಷ ಹಣ ಬಿಡುಗಡೆಯಾಗಿದ್ದರೂ ಗುಂಡಿಬಿದ್ದ ರಸ್ತೆಗಳಿಗೆ ತೇಪೆ ಹಾಕಿ ಹೆದ್ದಾರಿಗೆ ಬಂದ ಗಿಡಗಂಟಿಗಳನ್ನು ಹಾಗೂ ರಸ್ತೆಯ ಇಬ್ಬದಿಗಳ ಚರಂಡಿಗಳನ್ನು ಸ್ವಚ್ಚ ಮಾಡದೇ ಅಪಘಾತಗಳು ಸಂಭವಿಸುತ್ತವೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಈಗ ಬೇಸಿಗೆ ರಜೆ ಇರುವುದರಿಂದ ಪ್ರವಾಸಿ ವಾಹನಗಳ ಸಂಚಾರ ಹೆಚ್ಚಾಗಿದೆ. ಈ ರಸ್ತೆಯೂ ಪ್ರಮುಖ ಯಾತ್ರಾ ಸ್ಥಳಗಳಿಗೆ ಸಂಪರ್ಕ ಕೊಂಡಿಯಾಗಿದ್ದು ನೂರಾರು ವಾಹನಗಳು ದಿನ ಸಂಚರಿಸುತ್ತಿದ್ದು ಅಪಘಾತಗಳ ಸಂಖ್ಯೆ ಹೆಚ್ಚಾಗಿದೆ. ಸೋಮವಾರ ಆಟೋ ಹಾಗೂ ಕಾರಿನ ನಡುವೆ ಅಪಘಾತ ಸಂಭಂವಿಸಿ 2 ವಾಹನಗಳು ಜಖಂಗೊಂಡಿದನ್ನು ಇಲ್ಲಿ ಸ್ಮರಿಸಬಹುದು. ಹೊರಜಿಲ್ಲೆಗಳಿಂದ ಬರುವ ವಾಹನ ಚಾಲಕರಿಗೆ ಈ ರಸ್ತೆಯ ಅರಿವಿಲ್ಲದೆ ಹಾಗೂ ಗಿಡಗಂಟಿಗಳಿಂದ ಮುಂದೆ ಬರುವ ವಾಹನಗಳು ಕಾಣದೆ ಅಪಘಾತಗಳು ಆಗುತ್ತಿವೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ತುರ್ತು ಕ್ರಮವಹಿಸಿ ಹೆದ್ದಾರಿಗೆ ಚಾಚಿಕೊಂಡಿರುವ ಗಿಡಗಂಟಿಗಳನ್ನು ತೆರವು ಮಾಡಿದರೆ ಅಪಘಾತಗಳಾಗುವುದನ್ನು ತಡೆಯಬಹುದು.
‘ಕೊಟ್ಟಿಗೆಹಾರದಿಂದ ಹೊರನಾಡು ಶೃಂಗೇರಿ ಕುದುರೆಮುಖ ಕಳಸ ಮೊದಲಾದ ಸ್ಥಳಗಳಿಗೆ ಈ ರಸ್ತೆಯೆ ಸಂಪರ್ಕ ಕಲ್ಪಿಸುತ್ತದೆ. ಈ ರಸ್ತೆಯ ಇಬ್ಬದಿಗಳಲ್ಲಿ ಗಿಡಗಂಟಿಗಳು ಹೆದ್ದಾರಿಗೆ ಚಾಚಿಕೊಂಡಿದ್ದು ಅಪಘಾತಗಳು ಸಂಬಂಭವಿಸುತ್ತಿವೆ. ಕೂಡಲೇ ಸಂಬಂದಪಟ್ಟ ಇಲಾಖೆ ಗಿಡಗಂಟಿಗಳನ್ನು ತೆರವುಗೊಳಿಸಿ ಮುಕ್ತ ಸಂಚಾರಕ್ಕೆ ಅನುವು ಮಾಡಿಕೊಡಬೇಕು.’
-ಪರೀಕ್ಷಿತ್ ಜಾವಳಿ, ಸ್ಥಳೀಯರು
‘ಕೊಟ್ಟಿಗೆಹಾರದಿಂದ ಕಳಸ ರಸ್ತೆಯಲ್ಲಿ ಅಪಘಾತಗಳು ಆಗುತ್ತಿರುವ ಬಗ್ಗೆ ದೂರುಗಳು ಕೇಳಿ ಬಂದಿದ್ದು ಈ ಹಿಂದೆ ಇದ್ದ ವೃತ್ತ ನಿರೀಕ್ಷಕರು ಜಿಲ್ಲಾಡಳಿತಕ್ಕೆ ಈ ರಸ್ತೆಯಲ್ಲಿ ಗಿಡಗಂಟಿಗಳು ರಸ್ತೆಗೆ ಬಾಗಿದ್ದು ಅಪಘಾತಗಳಾಗುತ್ತಿರುವ ಬಗ್ಗೆ ವರದಿಯನ್ನು ಸಲ್ಲಿಸಲಾಗಿತ್ತು. ಆದರೆ ಅದಿನ್ನೂ ಕಾರ್ಯರೂಪಕ್ಕೆ ಬಂದಿಲ್ಲ. ಮತ್ತೊಮ್ಮೆ ಜಿಲ್ಲಾಡಳಿತಕ್ಕೆ ವಸ್ತುಸ್ಥಿತಿಯನ್ನು ಮನವರಿಕೆ ಮಾಡಿಕೊಡಲಾಗುವುದು’ -ರಘು ವೃತ್ತ ನಿರೀಕ್ಷಕರು ಮೂಡಿಗೆರೆ
‘ಗಿಡಗಂಟಿಗಳು ರಸ್ತೆಗೆ ಚಾಚಿಕೊಂಡ ಬಗ್ಗೆ ದೂರುಗಳು ಕೇಳಿ ಬಂದಿದ್ದು ಮೇಲಾಧಿಕಾರಿಗಳಿಗೆ ವರದಿ ಕಳಿಸಲಾಗಿದೆ. ಇನ್ನೊಂದು ತಿಂಗಳಲ್ಲಿ ಟೆಂಡರ್ ಆಗಲಿದ್ದು ಶೀಘ್ರದಲ್ಲಿ ಕಾಮಗಾರಿ ಮುಗಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಳ್ಳಲಾಗುವುದು’
-ನಂಜುಂಡಯ್ಯ, ಇಂಜಿನಿಯರ್ ಲೋಕೋಪಯೋಗಿ ಇಲಾಖೆ










