ಕೊಪ್ಪಳ : ತಂದೆ ಮಾಡಿದ ಸಾಲ ತೀರಿಸಿಲ್ಲ ಎಂಬ ಕಾರಣಕ್ಕೆ ಸಾಲ ಕೊಟ್ಟವರು ಮಗನನ್ನು ಮರಕ್ಕೆ ಕಟ್ಟಿ ಹಾಕಿ ಥಳಿಸಿರುವ ಅಮಾನುಷ ಘಟನೆ ಜಿಲ್ಲೆಯ ಕುಷ್ಟಗಿ ತಾಲೂಕಿನ ಕೆ.ಹೊಸೂರು ಗ್ರಾಮದಲ್ಲಿ ನಡೆದಿದೆ.
ದೊಡ್ಡ ಬಸಪ್ಪ ಮಡಿವಾಳರ (14) ಎಂಬ ಬಾಲಕನಿಗೆ ಥಳಿಸಿದ ಆರೋಪ ಕೇಳಿ ಬಂದಿದೆ. 2022ರ ಡಿ.28 ರಂದು ಘಟನೆ ನಡೆದಿದ್ದು, ಸ್ಥಳೀಯ ಪೊಲೀಸರು ಪ್ರಕರಣ ದಾಖಲಿಸಿಲ್ಲ. ಬಾಲಕನ ತಾಯಿ ಮಂಜುಳಾ ಡಿ.31 ರಂದು ಎಸ್ ಪಿಗೆ ದೂರು ನೀಡಿದ್ದು, ತಡವಾಗಿ ಬೆಳಕಿಗೆ ಬಂದಿದೆ.
ತಂದೆ ಮರಿಯಪ್ಪ ಮಡಿವಾಳರ ಮಾಡಿದ ಸಾಲ ತೀರಿಸಿಲ್ಲ ಎಂದು ಸಾಲ ಕೊಟ್ಟವರು ನನ್ನ ಮಗನಿಗೆ ಥಳಿಸಿದ್ದಾರೆ ಎಂದು ಕನಕರಾಯ ಮಡಿವಾಳರ, ರಾಜೇಶ್ವರಿ ಮಡಿವಾಳರ, ವೀರಭದ್ರಪ್ಪ ಮಡಿವಾಳರ, ಗಂಗಮ್ಮ ಮಡಿವಾಳರ, ನಿರುಪಾದೆಪ್ಪ ಮಡಿವಾಳರ, ಬಸವರಾಜ ಮಡಿವಾಳರ ಎನ್ನುವವರ ವಿರುದ್ಧ ಬಾಲಕನ ತಾಯಿ ಮಂಜುಳಾ ದೂರು ನೀಡಿದ್ದಾರೆ.
ಮರಿಯಪ್ಪ ಮಡಿವಾಳರ ಎಂಬಾತ 40 ಸಾವಿರ ರೂಪಾಯಿ ಸಾಲ ಪಡೆದಿದ್ದನಂತೆ. ನಂತರ 30 ಸಾವಿರ ಸಾಲ ತೀರಿಸಿದ್ದು, ಇನ್ನು 10 ಸಾವಿರ ರೂ. ಬಾಕಿ ಇತ್ತು. ಸಕಾಲಕ್ಕೆ ತೀರಿಸಿಲ್ಲ ಎಂದು ಸಾಲಕೊಟ್ಟವರು ಮಗನನ್ನು ಥಳಿಸಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.










