ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ ಹರ್ಭಜನ್ ಸಿಂಗ್.

106
firstsuddi

ಹೈದರಾಬಾದ್ : ಟೀಂ ಇಂಡಿಯಾದ ಯಶಸ್ವಿ ಸ್ಪಿನ್ನರ್ ಗಳಲ್ಲಿ ಒಬ್ಬರಾಗಿದ್ದ ಹರ್ಭಜನ್ ಸಿಂಗ್(41) ಅಂತಾರಾಷ್ಟ್ರೀಯ ಕ್ರಿಕೆಟ್ ವೃತ್ತಿ ಬದುಕಿಗೆ ವಿದಾಯ ಹೇಳಿದ್ದಾರೆ. ಕೇವಲ 17ನೇ ವಯಸ್ಸಿನಲ್ಲಿ ಕ್ರಿಕೆಟ್ ವೃತ್ತಿಗೆ ಪಾದಾರ್ಪಣೆ ಮಾಡಿದ್ದ ಹರ್ಭಜನ್ ಸಿಂಗ್ ಈಗ 23 ವರ್ಷಗಳ ಕ್ರಿಕೆಟ್ ಆಟಕ್ಕೆ ನಿವೃತ್ತಿ ಘೋಷಿಸಿದ್ದಾರೆ.

ಈ ವಿಚಾರವನ್ನು ಟ್ವಿಟರ್ ಮೂಲಕ ತಿಳಿಸಿರುವ ಹರ್ಭಜನ್ ಸಿಂಗ್, ಎಲ್ಲ ಒಳ್ಳೆಯ ದಿನಗಳು ಒಂದು ದಿನ ಕೊನೆಗೊಳ್ಳಲೇಬೇಕು. ನನ್ನ ಜೀವನದಲ್ಲಿ ಎಲ್ಲವನ್ನೂ ನೀಡಿದ ಆಟಕ್ಕೆ ವಿದಾಯ ಘೋಷಣೆ ಮಾಡುತ್ತಿದ್ದೇನೆ. ಈ 23 ವರ್ಷಗಳ ಸುದೀರ್ಘ ಪ್ರಯಾಣವನ್ನು ಸುಂದರ ಮತ್ತು ಸ್ಮರಣೀಯವಾಗಿಸಿದ ಪ್ರತಿಯೊಬ್ಬರಿಗೂ ನಾನು ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಬರೆದುಕೊಂಡಿದ್ದಾರೆ.

ಹರ್ಭಜನ್ ಸಿಂಗ್ 1998ರಲ್ಲಿ ಚೆನ್ನೈನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಪಂದ್ಯದೊಂದಿಗೆ ತಮ್ಮ ಅಂತಾರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದ್ದರು. 2006ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧ ಟಿ20ಗೆ ಪಾದಾರ್ಪಣೆ ಮಾಡಿದ್ದರು. 2007ರ ಟಿ20 ವಿಶ್ವಕಪ್ ಮತ್ತು 2011ರ ವಿಶ್ವಕಪ್ ನಲ್ಲಿ ಪ್ರಶಸ್ತಿ ಜಯಿಸಿದ ಭಾರತ ತಂಡದ ಸದಸ್ಯರಾಗಿದ್ದ ಹರ್ಭಜನ್ ಟೀಂ ಇಂಡಿಯಾ ವಿಶ್ವಕಪ್ ಜಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದ್ದರು.

ಟೀಂ ಇಂಡಿಯಾ ಪರ ಕೊನೆಯದಾಗಿ 2016ರಲ್ಲಿ ಆಡಿದ್ದ ಹರ್ಭಜನ್, 103 ಟೆಸ್ಟ್ ಪಂದ್ಯಗಳಿಂದ 417 ವಿಕೆಟ್ ಪಡೆದಿದ್ದು, ಈ ಮೂಲಕ ಅತಿ ಹೆಚ್ಚು ವಿಕೆಟ್ ಕಿತ್ತ ಭಾರತದ ಬೌಲರ್ ಗಳ ಪೈಕಿ ನಾಲ್ಕನೇ ಸ್ಥಾನ ಪಡೆದಿದ್ದಾರೆ. ಹರ್ಭಜನ್ ಸಿಂಗ್ ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ಪರ ಆಡಿದ್ದಾರೆ. ಇದರಲ್ಲಿ ಒಟ್ಟು 150 ವಿಕೆಟ್‌ಗಳನ್ನು ಪಡೆದಿದ್ದಾರೆ.