ಕ್ಷುಲ್ಲಕ ಕಾರಣ – ಇಬ್ಬರು ಯುವಕರ ಬರ್ಬರ ಹತ್ಯೆ…

73
firstsuddi

ಬೆಳಗಾವಿ : ಕ್ಷುಲ್ಲಕ ಕಾರಣಕ್ಕೆ ಚಾಕುವಿನಿಂದ ಇರಿದು ಇಬ್ಬರು ಯುವಕರನ್ನು ಹತ್ಯೆ ಮಾಡಿರುವ ಘಟನೆ ನಗರದ ಹೊರವಲಯದಲ್ಲಿರುವ ಶಿಂದೊಳ್ಳಿ ಗ್ರಾಮದಲ್ಲಿ ನಿನ್ನೆ ತಡರಾತ್ರಿ ನಡೆದಿದೆ.

ಬಸವರಾಜ್ ಬೆಳಗಾಂವ್ಕರ್(22), ಗಿರೀಶ ನಾಗಣ್ಣವರ(22) ಹತ್ಯೆಯಾದವರು. ಶಿಂದೋಳಿ ಗ್ರಾಮದ ಸರ್ಕಾರಿ ಶಾಲೆಯ ಮೈದಾನದಲ್ಲಿ ಹೊನಲು ಬೆಳಕಿನ ಕ್ರಿಕೆಟ್ ಆಯೋಜನೆ ಮಾಡಲಾಗಿತ್ತು. ಈ ವೇಳೆ ಅಪರಿಚಿತ ವ್ಯಕ್ತಿಗಳು ಮೈದಾನದಲ್ಲಿ ವಾಹನ ನುಗ್ಗಿಸಿದ್ದಾರೆ. ಇದಕ್ಕೆ ಕ್ರಿಕೆಟ್ ಆಡುತ್ತಿದ್ದ ಯುವಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಇದರಿಂದ ಸಿಟ್ಟಾದ ಅಪರಿಚಿತ ವಾಹನ ಚಾಲಕ ವಾಹನದಿಂದ ಕೆಳಗಿಳಿದು ಇಬ್ಬರಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಹತ್ಯೆ ಮಾಡಿ ಪರಾರಿಯಾಗಿದ್ದಾನೆ. 

ಇಬ್ಬರ ಮೃತದೇಹಗಳನ್ನು ಬೆಳಗಾವಿಯ ಬಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಸ್ಥಳದಲ್ಲಿ ಬಿಗುವಿನ ವಾತಾವರಣ ಸೃಷ್ಟಿಯಾಗಿದ್ದು, ಸ್ಥಳಕ್ಕೆ ಭೇಟಿ ನೀಡಿದ ಡಿಸಿಪಿ ರವೀಂದ್ರ ಗಡಾದಿ, ಎಸಿಪಿ ನಾರಾಯಣ ಅವರು ಪರಿಶೀಲನೆ ನಡೆಸಿದ್ದಾರೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಮುನ್ನೆಚ್ಚರಿಕಾ ಕ್ರಮವಾಗಿ ಪೊಲೀಸ್ ಭದ್ರತೆ ಕೈಗೊಳ್ಳಲಾಗಿದ್ದು, ಜಿಲ್ಲಾಸ್ಪತ್ರೆ ಬಳಿ ಕೆಎಸ್ ಆರ್ ಪಿ ತುಕಡಿ ನಿಯೋಜಿಸಲಾಗಿದೆ.