ಗಾಜಾಪಟ್ಟಿ: ಗಾಜಾ ಮೇಲೆ ಇಸ್ರೇಲ್ ನಡೆಸಿದ ದಾಳಿಯಲ್ಲಿ ಐವರು ಪತ್ರಕರ್ತರು ಮೃತಪಟ್ಟಿದ್ದಾರೆ ಎಂದು ಆಸ್ಪತ್ರೆ ಮತ್ತು ಅವರ ಸುದ್ದಿ ಔಟ್‍ಲೆಟ್ ಹೇಳಿಕೆಯನ್ನು ಉಲ್ಲೇಖಿಸಿ ಸಿಎನ್‍ಎನ್ ಮಾಹಿತಿ ತಿಳಿಸಿದೆ. ಆಸ್ಪತ್ರೆಯ ಪ್ರಕಾರ, ಇಸ್ರೇಲ್ ದಾಳಿಯಲ್ಲಿ ಅಲ್-ಕುದ್ಸ್ ಟುಡೇ ಟೆಲಿವಿಷನ್‍ಗೆ ಸೇರಿದ ವಾಹನದಲ್ಲಿದ್ದ ಐದು ಜನ ಪತ್ರಕರ್ತರು ಮೃತಪಟ್ಟಿದ್ದಾರೆ. ದಾಳಿ ನಡೆಯುವ ವೇಳೆ ಈ ವಾಹನ ಅಲ್-ಅವ್ದಾ ಆಸ್ಪತ್ರೆಯ ಹೊರಗೆ ನಿಲ್ಲಿಸಲಾಗಿತ್ತು. ಮೃತ ಪತ್ರಕರ್ತರಾದ ಮೊಹಮ್ಮದ್ ಅಲ್-ಲದಾ, ಫೈಸಲ್ ಅಬು ಅಲ್-ಕುಮ್ಸಾನ್, ಅಯ್ಮಾನ್ ಅಲ್-ಜಾದಿ, ಫಾದಿ ಹಸ್ಸೌನಾ ಮತ್ತು ಇಬ್ರಾಹಿಂ ಅಲ್-ಶೇಖ್ ಅಲಿ ಅವರು ದಾಳಿಯ ಸಮಯದಲ್ಲಿ ವಾಹನದಲ್ಲಿ ನಿದ್ದೆಗೆ ಜಾರಿದ್ದರು ಎಂದು ಮಾಹಿತಿ ತಿಳಿಸಿದೆ. ಅಲ್-ಕುಡ್ಸ್ ಟುಡೇ ಟೆಲಿವಿಷನ್ ಇಸ್ರೇಲ್ ದಾಳಿಯನ್ನು ಖಂಡಿಸಿದೆ ಮತ್ತು ಐವರು “ತಮ್ಮ ಪತ್ರಿಕೋದ್ಯಮ ಮತ್ತು ಮಾನವೀಯ ಕರ್ತವ್ಯವನ್ನು ನಿರ್ವಹಿಸುವಾಗ” ಸಾವನ್ನಪ್ಪಿದ್ದಾರೆ ಎಂದು ಮಾಹಿತಿ ತಿಳಿದುಬಂದಿದೆ. ತಾನು “ನುಸೇರಾತ್ ಪ್ರದೇಶದ ಇಸ್ಲಾಮಿಕ್ ಜಿಹಾದ್ ಭಯೋತ್ಪಾದಕ ಸೆಲ್” ಮೇಲೆ ದಾಳಿ ನಡೆಸಿರುವುದಾಗಿ ಇಸ್ರೇಲಿ ಮಿಲಿಟರಿ ತಿಳಿಸಿದೆ. ಆದಾಗ್ಯೂ, ಅದು ತನ್ನ ಆರೋಪಗಳಿಗೆ ಯಾವುದೇ ಸಾಕ್ಷಿಯನ್ನು ಒದಗಿಸಿರುವುದ್ದಿಲ್ಲ ಎಂದು ಇಸ್ರೇಲಿ ಮಿಲಿಟರಿ ತಿಳಿಸಿದೆ.










