ಗುಜರಾತ್‍ನಲ್ಲಿ ಸಿಡಿಲು ಬಡಿದು 20 ಮಂದಿ ಸಾವು…

113
firstsuddi

ಗಾಂಧಿನಗರ: ಗುಜರಾತ್‍ನಲ್ಲಿ ಸುರಿದ ಅಕಾಲಿಕ ಮಳೆಯ ನಂತರ ಸಿಡಿಲು ಬಡಿದು 20 ಮಂದಿ ಸಾವನ್ನಪ್ಪಿರುವ ಘಟನೆ
ನಡೆದಿದೆ.

ಘಟನೆಯಲ್ಲಿ ಕೆಲವರು ಗಾಯಗೊಂಡಿದ್ದು, ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಅಲ್ಲದೇ ಹಲವು ಪ್ರದೇಶಗಳಲ್ಲಿ ಬೆಳೆ ಹಾನಿಯಾಗಿರುವುದಾಗಿ ಅಧಿಕಾರಿಗಳು ತಿಳಿಸಿದ್ದಾರೆ.

ಗುಜರಾತ್‍ನ 251 ತಾಲೂಕುಗಳ ಪೈಕಿ 220 ತಾಲೂಕುಗಳಲ್ಲಿ ನಿನ್ನೆ ಬೆಳಗ್ಗೆ 6 ರಿಂದ 10 ಗಂಟೆಗಳಲ್ಲಿ 50 ಮಿಮೀ ವರೆಗೆ ಮಳೆಯಾಗಿದೆ. ಇನ್ನು ಈ ಅಕಾಲಿಕ ಮಳೆ ಈಶಾನ್ಯ ಅರೇಬಿಯನ್ ಸಮುದ್ರ ಮತ್ತು ಪಕ್ಕದ ಸೌರಾಷ್ಟ್ರ ಮತ್ತು ಕಚ್ ಪ್ರದೇಶಗಳಲ್ಲಿ ಚಂಡಮಾರುತ ಉಂಟಾಗಿದ್ದು, ಇದಕ್ಕೆ ಕಾರಣ ಎಂದು ಭಾರತೀಯ ಹವಾಮಾನ ಇಲಾಖೆ (ಐಎಂಡಿ) ತಿಳಿಸಿದೆ.

ಕೇಂದ್ರ ಗೃಹಸಚಿವ ಅಮಿತ್ ಶಾ ಅವರು ಸಂತ್ರಸ್ತರ ಕುಟುಂಬಗಳಿಗೆ ಸಾಂತ್ವನ ಹೇಳಿದ್ದಾರೆ. ಗುಜರಾತ್‍ನ ವಿವಿಧ ನಗರಗಳಲ್ಲಿ ಪ್ರತಿಕೂಲ ಹವಾಮಾನ ಮತ್ತು ಸಿಡಿಲಿನಿಂದ ಅನೇಕರು ಸಾವನ್ನಪ್ಪಿದ್ದಾರೆ. ಸುದ್ದಿ ತಿಳಿದು ಅತೀವ ದುಃಖವಾಗಿದೆ. ಈ ದುರಂತದಲ್ಲಿ ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡವರಿಗೆ ತುಂಬಲಾರದ ನಷ್ಟವಾಗಿದೆ. ಅದಕ್ಕೆ ನಾನು ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಶಾ ಸಂತಾಪ ಸೂಚಿಸಿದ್ದಾರೆ.