ನವದೆಹಲಿ : ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಣೆ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ನಿರ್ದೇಶನ ನೀಡುವಂತೆ ಸಲ್ಲಿಸಲಾಗಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.
ಗೋವನ್ನು ರಾಷ್ಟ್ರೀಯ ಪ್ರಾಣಿ ಎಂದು ಘೋಷಿಸಲು ಕೇಂದ್ರಕ್ಕೆ ನಿರ್ದೇಶನ ನೀಡುವಂತೆ ಕೋರಿ ಸರ್ಕಾರೇತರ ಸಂಸ್ಥೆ (ಎನ್ ಜಿಒ) ಗೋವಂಶ್ ಸೇವಾ ಸದನ್ ಮತ್ತು ಇತರರು ಸಲ್ಲಿಸಿದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ಕೈಗೆತ್ತಿಕೊಂಡ ನ್ಯಾಯಮೂರ್ತಿಗಳಾದ ಎಸ್ ಕೆ ಕೌಲ್ ಮತ್ತು ಅಭಯ್ ಎಸ್ ಓಕಾ ಅವರ ಪೀಠವು, ಅರ್ಜಿದಾರರಿಗೆ ನಿಮ್ಮ ಯಾವ ಮೂಲಭೂತ ಹಕ್ಕಿನ ಮೇಲೆ ಇದು ಪರಿಣಾಮ ಬೀರುತ್ತಿದೆ ಎಂದು ಪ್ರಶ್ನಿಸಿದೆ.
ಇದು ನ್ಯಾಯಾಲಯದ ಕೆಲಸವೇ? ವೆಚ್ಚವನ್ನು ವಿಧಿಸಲು ನಾವು ಒತ್ತಾಯಿಸಿದಾಗ ನೀವು ಅಂತಹ ಅರ್ಜಿಗಳನ್ನು ಏಕೆ ಸಲ್ಲಿಸುತ್ತೀರಿ? ಯಾವ ಮೂಲಭೂತ ಹಕ್ಕನ್ನು ಉಲ್ಲಂಘಿಸಲಾಗಿದೆ? ನೀವು ನ್ಯಾಯಾಲಯಕ್ಕೆ ಬಂದಿರುವುದರಿಂದ ನಾವು ಕಾನೂನನ್ನು ಗಾಳಿಗೆ ತೂರಬೇಕೇ? ಎಂದು ಪೀಠ ಹೇಳಿದೆ.
ಅರ್ಜಿದಾರರ ಪರ ವಕೀಲರು, ಗೋಸಂರಕ್ಷಣೆ ಬಹಳ ಮುಖ್ಯ ಎಂದು ನ್ಯಾಯಾಲಯದಲ್ಲಿ ವಾದಿಸಿದರು. ಈ ವೇಳೆ ನ್ಯಾಯಪೀಠ, ದಂಡ ವಿಧಿಸುವುದಾಗಿ ಎಚ್ಚರಿಕೆ ನೀಡಿ, ಅರ್ಜಿಯನ್ನು ಹಿಂಪಡೆಯಲಾಗಿದೆ ಎಂದು ವಜಾಗೊಳಿಸಿತು.










