ಬೆಂಗಳೂರು : ಗ್ಯಾಸ್ ಗೀಸರ್ ನಿಂದ ಅನಿಲ ಸೋರಿಕೆಯಾದ ಪರಿಣಾಮ ತಾಯಿ-ಮಗಳು ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ಬೆಂಗಳೂರು ಉತ್ತರ ತಾಲೂಕಿನ ಚಿಕ್ಕಬಾಣಾವರದಲ್ಲಿ ನಡೆದಿದೆ.
ಮಂಗಳಾ(35) ಹಾಗೂ ಮಗಳು ಗೌತಮಿ(7) ಮೃತ ದುರ್ದೈವಿಗಳು. ಮಂಜುಳಾ ಪತಿ ನರಸಿಂಹಮೂರ್ತಿ ಕೆಲಸಕ್ಕೆ ತೆರಳಿದ ಸಮಯದಲ್ಲಿ ಈ ದುರ್ಘಟನೆ ಸಂಭವಿಸಿದೆ.
ಮಂಗಳಾ ಅವರು ಗ್ಯಾಸ್ ಗೀಸರ್ ಆನ್ ಮಾಡಿ ಮಗಳು ಗೌತಮಿಗೆ ಸ್ನಾನ ಮಾಡಿಸಲೆಂದು ಹೋಗಿದ್ದರು. ಈ ವೇಳೆ ಗೀಸರ್ ನಿಂದ ಅನಿಲ ಸೋರಿಕೆಯಾಗಿ ಇಡೀ ಕೊಠಡಿ ಆವರಿಸಿದೆ. ಪರಿಣಾಮ ಉಸಿರಾಡಲು ಸಾಧ್ಯವಾಗದೆ ಅಮ್ಮ-ಮಗಳು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ.
ಇತ್ತ ಸಂಜೆಯಾದರೂ ಮಂಗಳಾ ಅವರು ಮನೆಯಿಂದ ಹೊರಬಾರದ್ದನ್ನು ಗಮನಿಸಿದ ಮಾಲೀಕರು ಮನೆಯೊಳಗೆ ಹೋಗಿ ನೋಡಿದಾಗ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸೋಲದೇವನಹಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










