ಬೆಂಗಳೂರು: ಇಂದು ಬೆಳಗ್ಗೆ 7.10ರ ಸುಮಾರಿಗೆ ನಗರದ ಯಲಹಂಕದ ಎಲ್‌ಬಿಎಸ್ ಲೇಔಟ್ನ ಮನೆಯೊಂದರಲ್ಲಿನ ಸಿಲಿಂಡರ್ ಸ್ಫೋಟಗೊಂಡು ಎಂಟು ಜನರು ಗಾಯಗೊಂಡಿದ್ದು, ಗಾಯಾಳುಗಳನ್ನು ಯಲಹಂಕದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸ್ಪೋಟದಿಂದ ಅಕ್ಕಪಕ್ಕದ ಮನೆಗಳು ಸೇರಿ ಒಟ್ಟು ಐದು ಮನೆಗಳಿಗೆ ಹಾನಿಯಾಗಿದೆ.
ಸಿಲಿಂಡರ್ ಸ್ಫೋಟದಿಂದಾಗಿ ಒಬ್ಬರಿಗೆ 60% ರಷ್ಟು ಸುಟ್ಟಗಾಯಗಳಾಗಿದ್ದು, ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಗಿದೆ. ಇಬ್ಬರನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಉಳಿದವರನ್ನು ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ಸೇರಿಸಲಾಗಿದೆ.
ಗಾಯಾಳುಗಳನ್ನು ಕಂಡ ಕುಟುಂಬಸ್ಥರು ಆತಂಕಗೊಂಡಿದ್ದಾರೆ. ಮನೆಯ ಅವಶೇಷಗಳನ್ನು ಕಂಡು ಗಾಬರಿಯಲ್ಲಿದ್ದಾರೆ. ಸ್ಥಳಕ್ಕೆ ಪೊಲೀಸರು ಹಾಗೂ ಅಗ್ನಿಶಾಮಕದಳ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ.
ಘಟನೆ ಸಂಬಂಧ ಗಾಯಾಳುಗಳ ಪೈಕಿ ಒಬ್ಬರು ಮಾತನಾಡಿ, ಬೆಳಗ್ಗೆ 7.10 ರ ಸುಮಾರಿಗೆ ಸಿಲಿಂಡ್ ಸ್ಪೋಟಗೊಂಡಿದೆ ಸಂಭವಿಸಿದೆ. ನಾವು ಮತ್ತು ನಮ್ಮ ತಂದೆ ಕೆಳಗೆ ಇದ್ವಿ. ನಮ್ಮ ಅಮ್ಮ ಮೊದಲ ಮಹಡಿಯಲ್ಲಿ ಇದ್ದರು. ಈ ವೇಳೆ ಶಾರ್ಟ್ ಸರ್ಕ್ಯೂಟ್ ಕೂಡ ಆಗಿದೆ. ನನಗೆ ಕರೆಂಟ್ ಹೊಡೆದು ಬಿದ್ದುಹೋದೆ. ಆಸ್ಪತ್ರೆಗೆ ಕರೆತಂದಿದ್ದಾರೆ ಎಂದು ಹೇಳಿದರು.
ಈ ಕುರಿತು ಯಲಹಂಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.










