ಬೆಂಗಳೂರು: ಚಂದ್ರನೆಡೆಗೆ ಹಾರಿಸಿರುವ ನೌಕೆಯ ವಿಕ್ರಂ ಲ್ಯಾಂಡರ್ ಲ್ಯಾಂಡಿಂಗ್‌ಗಾಗಿ ಸುರಕ್ಷಿತ ಪ್ರದೇಶವನ್ನು ಪತ್ತೆಹಚ್ಚಲು ಸಹಾಯ ಮಾಡುವ ಕ್ಯಾಮೆರಾದಿಂದ ಹೊಸ ಫೋಟೋಗಳನ್ನು ಸೆರೆಹಿಡಿದಿದೆ.
ವಿಕ್ರಮ್ ಲ್ಯಾಂಡರ್ ಕಳುಹಿಸಿದ ಈ ಫೋಟೋಗಳನ್ನು ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೋ) ಅಧಿಕೃತ ಟ್ವಿಟರ್ ಹ್ಯಾಂಡಲ್‌ನಲ್ಲಿ ಹಂಚಿಕೊಂಡಿದೆ. ಫೋಟೋದಲ್ಲಿ ಭೂಮಿಗೆ ಕಾಣಿಸದ ಚಂದ್ರನ ಮತ್ತೊಂದು ಮುಖ ಕಾಣಿಸಿದೆ. ಚಂದ್ರನ ಮಗ್ಗಲಿನಲ್ಲಿ ಸಾಕಷ್ಟು ಕುಳಿಗಳು ಇರುವುದು ಫೋಟೋದಲ್ಲಿ ಕಂಡು ಬಂದಿದೆ.
“ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಆಂಡ್ ಅವಾಯಿಡೆನ್ಸ್ ಕ್ಯಾಮೆರಾ (ಎಲ್‌ಎಚ್‌ಡಿಎಸಿ) ಮೂಲಕ ಈ ಚಿತ್ರಗಳನ್ನು ಸೆರೆಹಿಡಿಯಲಾಗಿದೆ. ಲ್ಯಾಂಡರ್ ಹಜಾರ್ಡ್ ಡಿಟೆಕ್ಷನ್ ಆಂಡ್ ಅವಾಯಿಡೆನ್ಸ್ ಕ್ಯಾಮೆರಾ (ಎಲ್‌ಎಚ್‌ಡಿಎಸಿ) ಸುರಕ್ಷಿತ ಲ್ಯಾಂಡಿಂಗ್ ಪ್ರದೇಶವನ್ನು ಪತ್ತೆಹಚ್ಚಲು ನೆರವಾಗಲಿದೆ. ಬಂಡೆಗಳು ಅಥವಾ ಆಳವಾದ ಕಂದಕಗಳಿಲ್ಲದ ಸ್ಥಳದಲ್ಲಿ ಇಳಿಯಲು ಇದು ನೆರವಾಗಲಿದೆ. ಇದನ್ನು ಎಸ್‌ಎಸಿ/ಇಸ್ರೊ ಅಭಿವೃದ್ಧಿಪಡಿಸಿದೆ” ಎಂದು ಸಾಮಾಜಿಕ ಮಾಧ್ಯಮ ಟ್ವಿಟರ್ ನಲ್ಲಿ ಇಸ್ರೋ ಹೇಳಿಕೊಂಡಿದೆ.
ಚಂದ್ರಯಾನ-3 ಮಿಷನ್ ಭಾಗವಾಗಿ ಬುಧವಾರ ಸಂಜೆ 06:04ರ ವೇಳೆಗೆ ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯಲಿದ್ದು, ಈ ದೃಶ್ಯವನ್ನು ಕಣ್ತುಂಬಿಕೊಳ್ಳಲು ನಗರದ ನೆಹರೂ ತಾರಾಲಯದಲ್ಲಿ ಬೃಹತ್ ಪರದೆ ಮೇಲೆ ನೇರ ಪ್ರಸಾರದ ವ್ಯವಸ್ಥೆ ಮಾಡಲಾಗಿದೆ. ಇದು ಯಶಸ್ವಿಯಾದರೆ ಚಂದ್ರನ ಮೇಲೆ ಲ್ಯಾಂಡರ್ ಇಳಿಸಿದ ಜಗತ್ತಿನ ನಾಲ್ಕನೇ ದೇಶವೆಂಬ ಹೆಗ್ಗಳಿಕೆಗೆ ಭಾರತ ಪಾತ್ರವಾಗಲಿದೆ. ಈಗಾಗಲೇ ಅಮೆರಿಕ, ರಷ್ಯಾ ಮತ್ತು ಚೀನಾ ದೇಶಗಳು ಈ ಕೀರ್ತಿಗೆ ಪಾತ್ರವಾಗಿವೆ.
ಬುಧವಾರ ಸಂಜೆ 5 ಗಂಟೆಯಿಂದ 6:30ರ ವರೆಗೆ ಬೃಹತ್ ಪರದೆ ಮೇಲೆ ನೇರ ಪ್ರಸಾರ ಹಾಗೂ ವೀಕ್ಷಣೆಗೆ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರು ವಿಕ್ರಂ ಲ್ಯಾಂಡರ್ ಚಂದ್ರನ ಮೇಲೆ ಇಳಿಯುವ ದೃಶ್ಯವನ್ನು ದೊಡ್ಡ ಪರದೆ ಮೇಲೆ ಕಣ್ತುಂಬಿಕೊಳ್ಳಬಹುದು. ನೇರ ಪ್ರಸಾರದೊಂದಿಗೆ ವಿಜ್ಞಾನಿಗಳಿಂದ ವಿವರಣಾ ಕಾರ್ಯಕ್ರಮ ಕೂಡಾ ನೆಹರೂ ತಾರಾಲಯದಲ್ಲಿ ನಡೆಯಲಿದೆ.










