ಬೆಂಗಳೂರು : ಚಾಮರಾಜಪೇಟೆ ಮೈದಾನದಲ್ಲಿ ಗಣೇಶ ಮೂರ್ತಿ ಕೂರಿಸುವ ವಿಚಾರಕ್ಕೆ ಅನುಮತಿ ಕೋರಿ ನನಗೆ ಈವರೆಗೂ ಯಾವುದೇ ಮನವಿಗಳು ಬಂದಿಲ್ಲ. ಗಣೇಶೋತ್ಸವಕ್ಕೆ ಅನುಮತಿ ಕೊಡುವ ಬಗ್ಗೆ ಸೂಕ್ತ ಸಮಯದಲ್ಲಿ, ಸೂಕ್ತ ಕಾಲದಲ್ಲಿ, ಸೂಕ್ತ ನಿರ್ಧಾರ ಮಾಡಲಾಗುತ್ತದೆ. ಡಿಸಿಗೆ ಮನವಿ ಕೊಟ್ಟಿದ್ದರೆ ಅವರು ಆ ಬಗ್ಗೆ ಸೂಕ್ತ ಸೂಚನೆ ಕೊಡುತ್ತಾರೆ ಎಂದು ಕಂದಾಯ ಸಚಿವ ಆರ್. ಅಶೋಕ್ ತಿಳಿಸಿದರು.
ವಿಧಾನಸೌಧದಲ್ಲಿ ಮಾತನಾಡಿದ ಅವರು, ಗಣೇಶೋತ್ಸವದ ಬಗ್ಗೆ ನಾನು ಕೂಡ ಗಂಭೀರವಾಗಿ ಆಲೋಚನೆ ಮಾಡುತ್ತಿದ್ದೇನೆ. ಕಾನೂನು ಸುವ್ಯವಸ್ಥೆ ಬಹಳ ಪ್ರಮುಖ. ಗಣೇಶ ಕೂರಿಸುವ ಸಂಬಂಧ ಇಂದು ಪೊಲೀಸರು, ಬಿಬಿಎಂಪಿ ಅಧಿಕಾರಿಗಳು ಸಭೆ ಮಾಡ್ತಿದ್ದಾರೆ. ಚಾಮರಾಜಪೇಟೆ ಗಣೇಶೋತ್ಸವ ವಿಚಾರ ಗಂಭೀರವಾಗಿ ಚಿಂತನೆ ಮಾಡಬೇಕಿದೆ. ಅಧಿಕಾರಿಗಳಿಂದ ನಾನು ಮಾಹಿತಿ ಪಡೆದಿದ್ದೇನೆ. ಸಿಎಂ ಜೊತೆ ಚರ್ಚೆ ಮಾಡಿ ನಿರ್ಧಾರ ಕೈಗೊಳ್ಳುತ್ತೇವೆ. ಸೂಕ್ತ ಸಮಯ ನೋಡಿಕೊಂಡು ತೀರ್ಮಾನ ಮಾಡುತ್ತೇವೆ ಎಂದರು.
ಮೊದಲ ಬಾರಿಗೆ ಈದ್ಗಾ ಮೈದಾನದಲ್ಲಿ ಆಗಸ್ಟ್ 15 ರಂದು ಗೊಂದಲ ಆಗದಂತೆ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡಿದ್ದೆವು. ಮುಂದೆ ಕನ್ನಡ ರಾಜ್ಯೋತ್ಸವ ಆಚರಣೆ ಮಾಡಲು ಆದೇಶ ಹೊರಡಿಸಲಿದ್ದೇವೆ ಎಂದು ಸಚಿವರು ತಿಳಿಸಿದರು.










