ಚಿಕ್ಕಬಳ್ಳಾಪುರದಲ್ಲಿ ಭೀಕರ ರಸ್ತೆ ಅಪಘಾತ – ಇಬ್ಬರು ಸಾವು, ಗರ್ಭಿಣಿಗೆ ಗಂಭೀರ ಗಾಯ…

63
firstsuddi

ಚಿಕ್ಕಬಳ್ಳಾಪುರ : ಭೀಕರ ರಸ್ತೆ ಅಪಘಾತದಲ್ಲಿ ಇಬ್ಬರು ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡ ಘಟನೆ ನಗರದ ರಾಮದೇವರ ಗುಡಿ ಬಳಿ ರಾಷ್ಟ್ರೀಯ ಹೆದ್ದಾರಿ 44ರಲ್ಲಿ ನಡೆದಿದೆ. ಅಪಘಾತದ ಭೀಕರ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ.

ಹೆದ್ದಾರಿಯಲ್ಲಿ ಅಡ್ಡ ಬಂದ ಕಾರು ತಪ್ಪಿಸಲು ಹೋಗಿ ಕ್ಯಾಂಟರ್ ಪ್ರಣವ್ ಹೋಟೆಲ್ ಗೆ ನುಗ್ಗಿದೆ. ಮೊದಲು ಬೈಕ್ ಹಾಗೂ ತದನಂತರ ಪ್ರಣವ್ ಹೋಟೆಲ್ ಮುಂಭಾಗ ನಿಂತಿದ್ದ ಐದು ಕಾರುಗಳಿಗೆ ಡಿಕ್ಕಿ ಹೊಡೆದಿದ್ದು, ಐದು ಕಾರುಗಳು ಜಖಂ ಆಗಿವೆ. ಘಟನೆಯಲ್ಲಿ ಪ್ರಣವ್ ಹೋಟೆಲ್ ಭದ್ರತಾ ಸಿಬ್ಬಂದಿ ನಾರಾಯಣಸ್ವಾಮಿ ಹಾಗೂ ಬೈಕ್ ಸವಾರ ಜನಾರ್ಧನ ಮೃತಪಟ್ಟಿದ್ದಾರೆ.

ಅಲ್ಲದೆ ಘಟನೆಯಿಂದ ಗರ್ಭಿಣಿಯೊಬ್ಬರು ಗಂಭೀರ ಗಾಯಗೊಂಡಿದ್ದು, ಗರ್ಭಾವಸ್ಥೆಯಲ್ಲಿದ್ದ ಮಗು ಮೃತಪಟ್ಟಿದೆ. ಮತ್ತೊಂದು ಮಗು ಪ್ರಾಣಾಪಾಯದಿಂದ ಪಾರಾಗಿದೆ. ಗಾಯಗೊಂಡ ನಾಲ್ವರನ್ನು ಚಿಕ್ಕಬಳ್ಳಾಪುರ ಜಿಲ್ಲಾಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

ಕ್ಯಾಂಟರ್ ಚಾಲಕ ತಮಿಳುನಾಡು ಮೂಲದ ಅಜಿತ್ ಎಂಬಾತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಪೆರೇಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.