ಚಿಕ್ಕಮಗಳೂರು : ಅಧಿಕಾರ ಮತ್ತು ಅಂತಸ್ತು ಎಂದಿಗೂ ಶಾಶ್ವತವಲ್ಲ : ಡಿಸಿಎಂ ಕಾರಜೋಳ.

367
firstsuddi

ಚಿಕ್ಕಮಗಳೂರು : ಅಧಿಕಾರ ಮತ್ತು ಅಂತಸ್ತು ಯಾವತ್ತು ಶಾಶ್ವತವಲ್ಲ ಶುದ್ಧಹಸ್ತ ಮತ್ತು ಸಕ್ರೀಯತೆ ಮನುಷ್ಯನನ್ನು ಯಾವ ಎತ್ತರಕ್ಕೆ ಬೇಕಾದರು ಕೊಂಡೊಯ್ಯುತ್ತದೆ ಎಂದು ಉಪಮುಖ್ಯಮಂತ್ರಿ ಗೋವಿಂದ ಎಂ. ಕಾರಜೋಳ ಅವರು ತಿಳಿಸಿದರು. ಮಂಗಳವಾರ ಕಲ್ಯಾಣನಗರದಲ್ಲಿರುವ ಬಿಜಿಪಿ ಮುಖಂಡ ದೀಪಕ್ ದೊಡ್ಡಯ್ಯ ರವರ ಮನೆಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು, ಬಿಜೆಪಿ ಪಕ್ಷದ ಕಾರ್ಯಕರ್ತರು ರಾಜ್ಯದಾದ್ಯಂತ ಪಕ್ಷ ನಿಷ್ಠೆಯಿಂದ ಕೆಲಸ ಮಾಡುತ್ತಿದ್ದಾರೆ. ಪಕ್ಷವು ನಿಷ್ಠೆಯಿಂದ ಕೆಲಸ ಮಾಡಿದವರಿಗೆ ಉತ್ತಮ ಅವಕಾಶಗಳನ್ನು ನೀಡುತ್ತಿದೆ. ಯಾರು ಸಹ ಅಧಿಕಾರಕ್ಕೆ ಅಂಟಿಕೊಳ್ಳದೆ ಪಕ್ಷದ ಕೆಲಸವನ್ನು ಮಾಡಬೇಕೆಂದರು.
ನಾನು ಪಕ್ಷದಲ್ಲಿ ಯಾವತ್ತೂ ಯಾವ ಹುದ್ದೆಯನ್ನು ಯಾರ ಬಳಿಯು ಬೇಡಿ ಪಡೆದಿಲ್ಲ, ನಾವು ಮಾಡುವ ಕಾರ್ಯವನ್ನು ನಿಷ್ಠೆಯಿಂದ ಪ್ರತಿಫಲಾಪೇಕ್ಷೆ ಇಲ್ಲದೆ ಮಾಡಿದರೆ ಉತ್ತಮ ಅವಕಾಶ ಮತ್ತು ಹುದ್ದೆಗಳು ನಮ್ಮನ್ನು ಉಡುಕಿಕೊಂಡು ಬರುತ್ತವೆ ಎಂಬುವುದಕ್ಕೆ ನಾನೆ ಜೀವಂತ ಉದಾಹರಣೆ ಎಂದರು.
ಪಕ್ಷದ ವರಿಷ್ಠರು ಯಾವ ಕ್ಷಣದಲ್ಲಿ ಅಧಿಕಾರ ತ್ಯಾಗ ಮಾಡಲು ಹೇಳಿದರೆ ತ್ಯಾಗ ಮಾಡಿ ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿ ಕೆಲಸ ಮಾಡುತ್ತೇನೆ. ಶಿಕ್ಷಣದಿಂದ ಮಾತ್ರ ಈ ಸಮಾಜದಲ್ಲಿರುವ ಅಸಮಾನತೆಯನ್ನು ಹೋಗಲಾಡಿಸಲು ಸಾಧ್ಯ. ಪ್ರತಿಯೊಬ್ಬರು ಸಮಾಜದ ಮುಖ್ಯ ವಾಹಿನಿಗೆ ಬರಬೇಕು. ಸಮಾಜದಲ್ಲಿರುವ ವಿವಿಧ ಜಾತಿ ಧರ್ಮ ಮತ್ತು ಜನಾಂಗಗಳು ಸಹೋದರತ್ವದ ಸಹಬಾಳ್ವೆ ನಡೆಸಬೇಕು. ಪರಸ್ಪರ ದ್ವೇಷ, ಮಾನವರು ತಮ್ಮೆಲ್ಲಾ ಕಷ್ಟ, ಸುಖಗಳನ್ನು ಸಮನಾಗಿ ಹಂಚಿಕೊಂಡು ಪರಸ್ಪರ ಪ್ರೀತಿ ವಿಶ್ವಾಸದಿಂದ ಬದುಕಬೇಕೆಂದು ಕಿವಿ ಮಾತು ಹೇಳಿದರು.
ಈ ಸಂದರ್ಭದಲ್ಲಿ ಉಸ್ತುವಾರಿ ಸಚಿವ ಸಿ.ಟಿ. ರವಿ, ವಿಧಾನ ಪರಿಷತ್ ಸಚಿವ ಎಂ.ಕೆ. ಪ್ರಾಣೇಶ್, ಆರ್.ಎಸ್.ಎಸ್ ಪ್ರಮುಖರಾದ ಮಲ್ಲಿಕಾರ್ಜುನ್ ರಾವ್, ರಾಷ್ಟ್ರೀಯ ಕಿಸಾನ್ ಸಂಗದ ಅಧ್ಯಕ್ಷರಾದ ಬಸವೇಗೌಡ, ಬ್ರಿಗೇಡ್ ಗ್ರೂಪ್‍ನ ಎಂ.ಆರ್. ಗುರುಮೂರ್ತಿ, ಡಾ ಜೆ.ಪಿ ಕೃಷ್ಣೇಗೌಡ, ಪತ್ರಕರ್ತರಾದ ಗಿರಿಜಾಶಂಕರ್, ತಿಪ್ಪೇರುದ್ರಪ್ಪ, ಬಿಜೆಪಿ ಜಿಲ್ಲಾಧ್ಯಕ್ಷ ಕಲ್ಮುರಡಪ್ಪ, ಮುಖಂಡರಾದ ಹೆಚ್.ಡಿ. ತಮ್ಮಯ್ಯ, ನರೇಂದ್ರ ಪೈ, ಎ.ಐ.ಟಿ ಕಾಲೇಜಿನ ಪ್ರಾಂಶುಪಾಲ ಡಾ. ಜಯದೇವ್, ಮಂಗಳೂರು ವಲಯದ ಐ.ಜಿ. ಅರುಣ್ ಚಕ್ರವರ್ತಿ ಮತ್ತಿತರರು ಉಪಸ್ಥಿತರಿದ್ದರು. ದೀಪಕ್ ದೊಡ್ಡಯ್ಯ ಸ್ವಾಗತಿಸಿ ಸುಶೀಲ ವಂದಿಸಿದರು.