ಚಿಕ್ಕಮಗಳೂರು : ಅನಧಿಕೃತವಾಗಿ ಬಾಡಿಗೆ ಹೊಡೆಯುತ್ತಿರುವ ವಾಹನಗಳನ್ನು ನಿರ್ಬಂದಿಸುವಂತೆ ಜಿಲ್ಲಾಡಳಿತಕ್ಕೆ ಒತ್ತಾಯ…

230
firstsuddi

ಚಿಕ್ಕಮಗಳೂರು : ಅನಧಿಕೃತವಾಗಿ ಬಾಡಿಗೆ ಹೊಡೆಯುತ್ತಿರುವ ವಾಹನಗಳನ್ನು ಜಿಲ್ಲೆಯಲ್ಲಿ ನಿರ್ಬಂದಿಸುವಂತೆ ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘ ಜಿಲ್ಲಾಡಳಿತವನ್ನು ಒತ್ತಾಯಿಸಿದೆ.
ಜಿಲ್ಲಾಧಿಕಾರಿ ಡಾ|| ಬಗಾಧಿ ಗೌತಮ್ ಅವರನ್ನು ಭೇಟಿ ಮಾಡಿದ ಸಂಘದ ಪದಾಧಿಕಾರಿಗಳು ಈ ಸಂಬಂಧ ಮನವಿ ಸಲ್ಲಿಸಿದರು.
ಲಾಕ್‍ಡೌನ್ ತೆರವುಗೊಂಡ ಹಿನ್ನೆಲೆಯಲ್ಲಿ ಜಿಲ್ಲೆಗೆ ಇತ್ತೀಚೆಗೆ ಹೆಚ್ಚು ಪ್ರವಾಸಿಗರು ಬರುತ್ತಿದ್ದಾರೆ, ಅವರೆಲ್ಲರೂ ತಮ್ಮ ಊರಿನಿಂದಲೇ ವಾಹನಗಳಲ್ಲಿ ಬರುತ್ತಿದ್ದಾರೆ, ಇದರ ಜೊತೆಗೆ ಜಿಲ್ಲೆಯ ಕೆಲವು ಹೋಂ ಸ್ಟೇಗಳವರು ಮತ್ತು ಲಾಡ್ಜ್ ನವರು ಕಮಿಷನ್ ಆಸೆಗಾಗಿ ಬೇರೆ ಜಿಲ್ಲೆಗಳಿಂದ ವಾಹನಗಳನ್ನು ಕರೆಸಿ ಪ್ರವಾಸಿಗರಿಗೆ ನೀಡುತ್ತಿದ್ದಾರೆ ಎಂದು ದೂರಿದರು.
ಕೆಲವರು ಯಾವುದೇ ಪರವಾನಗಿ ಇಲ್ಲದೇ ತಮ್ಮ ಸ್ವಂತ ಖಾಸಗೀ ವಾಹನಗಳಲ್ಲೂ ಬಾಡಿಗೆ ಹೊಡೆಯುತ್ತಿದ್ದಾರೆ. ಇದರ ಜೊತೆಗೆ ಬೈಕುಗಳಿಗೆ ಕೂಡ ಪರವಾನಗಿ ನೀಡಿರುವುದರಿಂದಾಗಿ ನಗರದಲ್ಲಿರುವ ಟ್ಯಾಕ್ಸಿ ಸ್ಟ್ಯಾಂಡ್‍ನತ್ತ ಪ್ರವಾಸಿಗರು ಮುಖ ಮಾಡುತ್ತಿಲ್ಲ ಎಂದು ಆರೋಪಿಸಿದರು.
ವೈಟ್ ಬೋರ್ಡ್ ಮತ್ತು ಹಳದಿ ಬೋರ್ಡ್ ಹೊಂದಿ ಅಧಿಕೃತವಾಗಿರುವ ಬಾಡಿಗೆ ವಾಹನಗಳಿಗೆ ಪ್ರವಾಸಿಗರು ದೊರೆಯುತ್ತಿಲ್ಲ ಹಾಗಾಗಿ ಅದನ್ನೇ ನಂಬಿ ಬದುಕುತ್ತಿರುವ ಕುಟುಂಬಗಳು ಆರ್ಥಿಕ ಸಂಕಷ್ಟಕ್ಕೀಡಾಗಿ ಬೀದಿಗೆ ಬೀಳುವ ಸ್ಥಿತಿಯಲ್ಲಿವೆ ಎಂದು ಅಳಲು ತೋಡಿಕೊಂಡರು.
ಈ ಹಿನ್ನೆಲೆಯಲ್ಲಿ ಪರವಾನಗಿ ಇಲ್ಲದೇ ಅನಧಿಕೃತವಾಗಿ ಬಾಡಿಗೆ ಹೊಡೆಯುತ್ತಿರುವ ವಾಹನಗಳನ್ನು ಜಿಲ್ಲೆಯಲ್ಲಿ ನಿರ್ಬಂದಿಸಬೇಕು ಎಂದು ಆಗ್ರಹಿಸಿದರು.
ಟ್ಯಾಕ್ಸಿ ಚಾಲಕರು ಮತ್ತು ಮಾಲೀಕರ ಸಂಘದ ಅಧ್ಯಕ್ಷ ಹೆಚ್.ಕುಮಾರ್, ಕಾರ್ಯದರ್ಶಿಗಳಾದ ಕೆ.ಈ.ಮಧುಕುಮಾರ್, ಭಾನುಪ್ರಕಾಶ್, ವಸಂತ, ರಾಜಣ್ಣ, ಸಿದ್ದರಾಜು, ಆನಂದ್, ರವಿ ಹಾಜರಿದ್ದರು.