ಚಿಕ್ಕಮಗಳೂರು : ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಪತ್ನಿ ಶ್ರೀಮಾತೆ ಶಾರದಾ ದೇವಿಯವರ 168ನೇ ಜನ್ಮ ದಿನಾಚರಣೆ ಇಲ್ಲಿನ ಆದಿಶಕ್ತಿನಗರದ ಶಾರದಾ ಮಠದಲ್ಲಿ ಇಂದು ಶ್ರದ್ದಾ ಭಕ್ತಿಯಿಂದ ನಡೆಯಿತು.
ಜನ್ಮ ದಿನದ ಪ್ರಯುಕ್ತ ಬೆಳಿಗ್ಗೆ ಶ್ರೀಮಾತೆ ಶಾರದಾ ದೇವಿಯವರಿಗೆ ಆರತಿ, ಉಷಾ ಕೀರ್ತನೆ, ವೇಧಘೋಷ, ವಿಶೇಷ ಪೂಜೆ, ಅಲಂಕಾರ, ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಜರುಗಿತು.
ಇದೇ ವೇಳೆ ಭಕ್ತರಿಂದ ಸಾಮೂಹಿಕ ಭಜನೆ, ಸ್ತೋತ್ರ ಪಠಣ, ನಾಮ ಸಂಕೀರ್ತನೆ ನಡೆದವು. ಶ್ರೀ ಮಠದ ಶ್ರೀ ಅಜಿತಪ್ರಾಣಾ ಮಾತಾಜಿ, ಶ್ರೀ ಗೋಪೇಶ ಪ್ರಾಣಾ ಮಾತಾಜಿ ಮತ್ತು ಬ್ರಹ್ಮಚಾರಿಣಿ ಡಾ|| ಅನ್ನಪೂರ್ಣ ಅವರಿಂದ ಧಾರ್ಮಿಕ ವಿಧಿವಿಧಾನಗಳೊಂದಿಗೆ ಶ್ರೀ ಶಾರದಾ ಮೂಲ ಮಂತ್ರ ಹೋಮ ಮತ್ತು ಶ್ರೀ ರಾಮಕೃಷ್ಣ ಮೂಲಮಂತ್ರ ಹೋಮ ನೆರವೇರಿತು.
ಹೋಮದ ಪೂರ್ಣಾಹುತಿ ಮತ್ತು ಮಹಾಮಂಗಳಾರತಿಯ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು.
ಇದೇ ವೇಳೆ ನಡೆದ ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀಮಠದ ಅಧ್ಯಕ್ಷೆ ಪ್ರವ್ರಾಜಿಕ ಶುಭವ್ರತ ಪ್ರಾಣಾ ಮಾತಾಜಿ ತಮ್ಮ ಸಾಧನೆ, ತ್ಯಾಗ ಮತ್ತು ಪರಿಶ್ರಮದಿಂದ ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ವೀರ ಸಂನ್ಯಾಸಿ ವಿವೇಕಾನಂದರನ್ನು ಆಧ್ಯಾತ್ಮಿಕವಾಗಿ ಬೆಳೆಸಿದ ಮಹಾನ್ ಶಕ್ತಿ ಶ್ರೀಮಾತೆ ಶಾರದಾದೇವಿಯವರು ಎಂದರು.
ಶ್ರೀಮಾತೆ ಶಾರದಾದೇವಿಯವರ ಬದುಕು, ತತ್ವ, ಸಂದೇಶ ಮತ್ತು ಆದರ್ಶಗಳು ಇಂದಿನ ಪೀಳಿಗೆಗೆ ದಾರಿದೀಪವಾಗಬೇಕು, ಎಲ್ಲರೂ ಆ ಬೆಳಕಿನಡಿಯಲ್ಲಿ ಸಾಗುವ ಮೂಲಕ ತಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಸೋದರಿ ನಿವೇದಿತಾ ಪ್ರತಿಷ್ಠಾನದ ನಿರ್ದೇಶಕಿ ಇಂದುಶ್ರೀ ಅವರು ಶ್ರೀಮಾತೆ ಶಾರದಾದೇವಿಯವರ ಬದುಕು ಮತ್ತು ಸಂದೇಶಗಳ ಕುರಿತು ಪ್ರವಚನ ನೀಡಿದರು.
ಜನ್ಮ ದಿನದ ಪ್ರಯುಕ್ತ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಬೆಳಗಿನಿಂದ ಸಂಜೆಯವರೆಗೆ ಶ್ರೀಮಠಕ್ಕೆ ತೆರಳಿ ಶ್ರೀಮಾತೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.
Home ಸ್ಥಳಿಯ ಸುದ್ದಿ ಚಿಕ್ಕಮಗಳೂರು : ಆದಿಶಕ್ತಿನಗರದ ಶಾರದಾ ಮಠದಲ್ಲಿ ಶ್ರೀಮಾತೆ ಶಾರದಾ ದೇವಿಯವರ 168ನೇ ಜನ್ಮ ದಿನಾಚರಣೆ…










