ಚಿಕ್ಕಮಗಳೂರು : ಎಬಿಸಿ ಕಾಫಿ ಬೆಳೆಗಾರರಿಗೆ ಕೊಡ ಬೇಕಾಗಿರುವ ಬಾಕಿ ಹಣವನ್ನು ಎರಡು ಕಂತಿನಲ್ಲಿ ಪಾವತಿ ಮಾಡಲಾಗುವುದು : ಜಯರಾಜ್ ಹುಬ್ಲಿ…

362
firstsuddi

ಚಿಕ್ಕಮಗಳೂರು : ಕಾಫಿ ಡೇ ಗ್ಲೋಬಲ್ ಲಿಮಿಟೆಡ್ (ಎಬಿಸಿ) ಕಾಫಿ ಬೆಳೆಗಾರರಿಗೆ ಕೊಡ ಬೇಕಾಗಿರುವ ಬಾಕಿ ಹಣದ ಮೊದಲ ಕಂತನ್ನು ಡಿಸೆಂಬರ್ ತಿಂಗಳಲ್ಲಿ ಒಟ್ಟು ಮೊತ್ತದ ಶೇ.30 ರಷ್ಟು ಹಣ ಹಾಗೂ ಉಳಿದ ಶೇ.70 ಹಣವನ್ನು ಏಪ್ರೀಲ್ ಅಥವಾ ಮೇ ತಿಂಗಳಲ್ಲಿ ಪಾವತಿ ಮಾಡಲಾಗುವುದೆಂದು ಕಾಫಿ ಡೇ ಎಂಟರ್ ಪ್ರೈಸಸ್ ಲಿಮಿಟೆಡ್ ನ ಮುಖ್ಯ ಹಣಕಾಸು ಅಧಿಕಾರಿ ಜಯರಾಜ್ ಹುಬ್ಲಿ ಭರವಸೆ ನೀಡಿದರು.
ನಿನ್ನೆ ಕಾಫಿ ಡೇ ಗ್ಲೋಬಲ್ ಲಿಮಿಟೆಡ್ ಆವರಣದಲ್ಲಿ ಕರೆದಿದ್ದ ಬೆಳೆ ಗಾರರ ಸಭೆಯಲ್ಲಿ ಈ ಭರವಸೆ ನೀಡಿದ ಅವರು ಕಂಪನಿಯ ಮಾಲೀಕರಾಗಿದ್ದ ಸಿದ್ದಾರ್ಥರವರ ಹಠಾತ್ ನಿಧನದಿಂದ ನಮ್ಮೆಲ್ಲರಿಗೂ ಆಘಾತವಾಗಿದ್ದು ಆ ಕಾರಣದಿಂದ ಕಾಫಿ ಬೆಳೆಗಾರರ ಸಭೆ ಕರೆಯಲು ವಿಳಂಭವಾಗಿದ್ದು ಅದಕ್ಕಾಗಿ ಕ್ಷಮೆಯಾಚಿಸು ವುದಾಗಿ ತಿಳಿಸಿದರು.
ಈಗಾಗಲೇ ಗ್ಲೋಬಲ್ ವಿಲೇಜ್ ಟೆಕ್‍ಪಾರ್ಕ್ ಮಾರಾಟಮಾಡುವ ಪ್ರಕ್ರಿಯೆ ನಡೆದಿದ್ದು ಅಮೇರಿಕಾದ ಬ್ಲಾಕ್‍ಸ್ಪೋನ್ ಗ್ರೂಪ್‍ಗೆ ಈ ಆಸ್ತಿಯನ್ನು ಮಾರುವುದರಿಂದ 2600 ಕೋಟಿಯಿಂದ 3 ಸಾವಿರ ಕೋಟಿಯಷ್ಟು ಹಣ ನಮಗೆ ಸಿಗಲಿದೆ. ಇದರ ಸ್ವಲ್ಪ ಹಣವನ್ನು ಕಾಫಿ ಬೆಳೆ ಗಾರರಿಗೆ ಕೊಡಲು ಬಳಸಲಾಗುವುದು. ಉಳಿಕೆ ಹಣ ಪಾವತಿಗಾಗಿ ಬೇರೆ ಆಸ್ತಿಗಳನ್ನು ಮಾರಾಟಮಾಡುವುದರಿಂದ ಬಂದ ಹಣದಲ್ಲಿ ಸಂದಾಯ ಮಾಡಲಾಗುವುದೆಂದರು.
ಡಿಸೆಂಬರ್ ಮತ್ತು ಏಪ್ರೀಲ್ ಹಾಗೂ ಮೇ ಎರಡು ಹಂತದಲ್ಲಿ ಕಾಫಿ ಬೆಳೆಗಾರರ ಹಣ ಪೂರ್ಣ ಪಾವತಿಸಲಾಗುವುದೆಂದರು.
ಈಗಾಗಲೇ ಕಾಫಿ ಕೊಟ್ಟ ಗ್ರಾಹಕರು ಚೆಕ್ ಅವಧಿ ಮುಗಿದು ಬೌನ್ಸ್ ಆಗಿದ್ದರೆ ಬದಲಿ ಚೆಕ್ ನೀಡಲಾಗುವುದು. ಅಲ್ಲದೇ ಅವಧಿ ಮುಗಿದಿರುವ ಚೆಕ್‍ಗಳಿಗೆ ಬಡ್ಡಿ ಸಹಿತ ರಿನಿವಲ್ ಮಾಡಿ ಕೊಡಲಾಗುವುದೆಂದರು.
ಬೆಳೆಗಾರರು ತೋಟದ ಕೆಲಸ ನಿರ್ವಹಿಸಲು ಮತ್ತು ಮಕ್ಕಳ ವಿದ್ಯಾಭ್ಯಾಸ, ಆರೋಗ್ಯ ಸಮಸ್ಯೆ ಇತ್ಯಾದಿಗಳಿಗೆ ಹಣದ ಅವಶ್ಯಕತೆ ಇರುವ ಬಗ್ಗೆ ಮತ್ತು ಬೆಳೆಗಾರರು ಅನುಭವಿಸುತ್ತಿರುವ ಸಂಕಷ್ಟದ ಅರಿವಿದೆ. ನಮ್ಮ ನ್ನು ಬೆಳೆಸಲು ನೀವು ಸಹಕರಿಸಿದ್ದೀರಿ. ನಮ್ಮ ಸಂಸ್ಥೆಯ ಬೆಳವಣಿಗೆಯ ಮೂಲ ಕಾಫಿ ಬೆಳೆಗಾರರಾಗಿದ್ದು ಅವರ ಹಣಕ್ಕೆ ಯಾವುದೇ ಧಕ್ಕೆಯಾಗದಂತೆ ಸಂಪೂರ್ಣ ಪಾವತಿ ಮಾಡಲಾಗುವುದೆಂದರು.
ನಮ್ಮ ಸಂಸ್ಥೆ ಉಳಿಸಲು ಅನಗತ್ಯ ಸಿಬ್ಬಂದಿ ಕಡಿತ ಮಾಡಲಾಗುವುದು. ಸಿಬ್ಬಂದಿಗಳಿಗೆ ಹಾಲಿ ನೀಡುತ್ತಿರುವ ವೇತನದಲ್ಲೂ ಕಡಿತಗೊಳಿಸಿ ಸಂಸ್ಥೆಯನ್ನು ಉಳಿಸಿಕೊಳ್ಳಲಾಗುವು ದೆಂದರು.
ಕಾಫಿ ದಾಸ್ತಾನು ಮಾಡಿರುವ ಬೆಳೆಗಾರರು ಬಿಲ್ ಹಾಕಿಸಿ ಚೆಕ್ ಪಡೆದುಕೊಳ್ಳಬಹುದು. ಆದರೆ ಅವರ ಕಾಫಿಯನ್ನು ವಾಪಸ್ ಕೊಡಲು ಇಲ್ಲಿ ಕಾಫಿ ಸಂಗ್ರಹವಿಲ್ಲ. 1500 ಟನ್ ಮನ್ಸೂನ್ ಕಾಫಿ ಮಂಗಳೂರಿನಲ್ಲಿ ಸಂಗ್ರಹಿಸಲಾಗಿದ್ದು ಅದನ್ನು ವಾಪಸ್ ತರಲಾಗುವುದಿಲ್ಲವೆಂದರು.
ಕಾಫಿ ಬೆಳೆಗಾರರಿಗೆ ಕೊಡಬೇಕಾದ ಹಣ ಕಡಿಮೆ ಇದೆ. ಮೊದಲು ಅವರಿಗೆ ಹಣ ಪಾವತಿಸಲು ಆದ್ಯತೆ ನೀಡುತ್ತೇವೆ. ನಂತರ ಪಿಕ್ಸೆಡ್ ಡಿಪಾಜಿಟ್ ಇಟ್ಟವರನ್ನು ಕರೆದು ಮುಂದಿನ ಹಂತದಲ್ಲಿ ಚರ್ಚಿಸಲಾಗುವುದು.
ಸಂಸ್ಥೆಯ ಮುಖ್ಯಸ್ಥರು ಸಭೆಗೆ ಬಾರದಿರುವಾಗ ಬಗ್ಗೆ ಬೆಳೆಗಾರರು ಆಕ್ಷೇಪವೆತ್ತಿದಾಗ ಮಾಳವಿಕ ಸಿದ್ದಾರ್ಥ ಅವರೇ ಸಭೆಗೆ ಬರಬೇಕಿತ್ತು. ಆದರೆ ಬೋರ್ಡ್ ಮೀಟಿಂಗ್ ಇದ್ದ ಕಾರಣ ನಮ್ಮನ್ನು ಕಳುಹಿಸಿದ್ದಾರೆಂದು ಸಮಾಜಾಯಿಸಿ ನೀಡಿದರು.
ಒಂದೇ ಕಂತಿನಲ್ಲಿ ಹಣ ಸಂದಾಯ ಮಾಡಿ ಇಲ್ಲವೇ ಮೊದಲ ಕಂತಿನಲ್ಲಿ ಶೇ.50 ರಷ್ಟಾದರೂ ಹಣ ಪಾವತಿಸಬೇಕೆಂಬ ಬೆಳೆಗಾರರ ಬೇಡಿಕೆಗೆ ಈ ಬಗ್ಗೆ ಬೋರ್ಡ್‍ನಲ್ಲಿ ಚರ್ಚೆ ಮಾಡುವ ಭರವಸೆ ನೀಡಿದರು. ಅತಿ ಕಷ್ಟದಲ್ಲಿರುವ 1 ಲಕ್ಷದಿಂದ 2 ಲಕ್ಷದ ವರೆಗಿನ ಹಣವನ್ನು ತುರ್ತಾಗಿ ಪಾವ ತಿಸಲು ಕ್ರಮವಹಿಸಲಾಗುವುದೆಂದರು. ಸಭೆಯಲ್ಲಿ ಸಂಸ್ಥೆಯ ಮುಖ್ಯಸ್ಥರಾದ ವೆಂಕಟೇಶ್, ಜಾವೀದ್, ಕಿರೀಟಿಸಾವನ್ ಉಪಸ್ಥಿತರಿದ್ದರು.