ಚಿಕ್ಕಮಗಳೂರು :ಗೊ.ರು.ಚನ್ನಬಸಪ್ಪ ಜಾನಪದ ಲೋಕದ ಬಹುದೊಡ್ಡ ಆಸ್ತಿ : ಉಪವಿಭಾಗಾಧಿಕಾರಿ ಡಾ|ಹೆಚ್.ಎನ್.ನಾಗರಾಜ್.

229

ಚಿಕ್ಕಮಗಳೂರು:ಹಿರಿಯ ಸಾಹಿತಿ ಗೊ.ರು.ಚನ್ನಬಸಪ್ಪ ಅವರು ನಾಡಿನ ಜಾನಪದ ಲೋಕದ ಬಹುದೊಡ್ಡ ಆಸ್ತಿ ಎಂದು ಉಪವಿಭಾಗಾಧಿಕಾರಿ ಡಾ|| ಹೆಚ್.ಎನ್.ನಾಗರಾಜ್ ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ಮತ್ತು ಶ್ರೀ ಬಸವೇಶ್ವರ ಭಜನಾ ಸಂಘ ತಾಲ್ಲೂಕಿನ ಬೆಳವಾಡಿಯಲ್ಲಿ ಭಾನುವಾರ ಏರ್ಪಡಿಸಿದ್ದ ಸಾಹಿತಿ ಗೊ.ರು.ಚ ಅವರ ಬದುಕು-ಬರಹ ಕುರಿತ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಬಹಳಷ್ಟು ವರ್ಷಗಳ ಹಿಂದೆ ಜಾನಪದ ಕಲಾವಿದರು ಯಾರಿಗೂ ಬೇಡವಾದವರಂತೆ ಎಲೆಮರೆ ಕಾಯಿಯ ಹಾಗೆ ಬದುಕುತ್ತಿದ್ದರು, ಜಿಲ್ಲೆಯಲ್ಲಿ ಜಾನಪದ ಸಮ್ಮೇಳನವನ್ನು ಮೊಟ್ಟಮೊದಲಿಗೆ ಮಾಡುವ ಮೂಲಕ ಆ ಕಲಾವಿದರನ್ನು ಬೆಳಕಿಗೆ ತಂದು ಅವರಿಗೆ ವೇದಿಕೆ ಕಲ್ಪಿಸಿ ಕೊಟ್ಟವರು ಗೊರುಚ ಎಂದು ತಿಳಿಸಿದರು.
ಗೊರುಚ ಅವರ ಪರಿಶ್ರಮದಿಂದಾಗಿ ಎಲೆಮರೆ ಕಾಯಿಯಂತೆ ಬದುಕುತ್ತಿದ್ದ ಜಾನಪದ ಕಲಾವಿದರು ರಾಜ್ಯ ಮಟ್ಟದ ಸಾಂಸ್ಕøತಿಕ ವೇದಿಕೆಗಳಲ್ಲಿ ಪಾಲ್ಗೊಳ್ಳಲು ಸಾಧ್ಯವಾಯಿತು, ಗೊರುಚ ಅವರಿಂದಾಗಿ ಚಿಕ್ಕಮಗಳೂರು ಜಿಲ್ಲೆಯಲ್ಲೂ ಜಾನಪದ ಕಲಾವಿದರು ವೇದಿಕೆ ಏರುವಂತಾಯಿತು ಎಂದು ತಿಳಿಸಿದರು.
ಗೊರುಚ ಅವರ ಬದುಕು-ಬರಹ ಕುರಿತು ಉಪನ್ಯಾಸ ನೀಡಿದ ಸಾಹಿತಿ ಚಟ್ನಳ್ಳಿ ಮಹೇಶ್ ಗ್ರಾಮೀಣ ಜಾನಪದ ಕಲೆ ಮತ್ತು ಜಾನಪದ ಸಂಸ್ಕøತಿಯನ್ನು ಆಳವಾಗಿ ಅಧ್ಯಯನ ಮಾಡಿ ಅದಕ್ಕೆ ಸ್ಪಷ್ಟ ರೂಪ ಕೊಟ್ಟವರು ಗೊರುಚ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಜಾನಪದ ಕಲೆ ಮತ್ತು ಸಂಸ್ಕøತಿ ಈ ನಾಡಿನ ತಾಯಿಬೇರು, ಜಾನಪದ ಸಂಸ್ಕøತಿಗೆ ಎಲ್ಲರನ್ನೂ ಒಗ್ಗೂಡಿಸುವ ಭಾವೈಕ್ಯತೆಯಿಂದ ಬಾಳಿಸುವ ಶಕ್ತಿ ಇದೆ ಎಂದು ತಿಳಿಸಿದರು.
ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ಅತಿಹೆಚ್ಚು ಅಂಕ ಗಳಿಸಿದ ಗ್ರಾಮದ ಶ್ರೀ ಉದ್ಭವ ಗಣಪತಿ ಪ್ರೌಢಶಾಲೆಯ ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಪ್ರತಿಭಾ ಪುರಸ್ಕಾರ ನೀಡಲಾಯಿತು, ಕೊರೋನಾ ಹಿನ್ನೆಲೆಯಲ್ಲಿ ಆರ್ಥಿಕ ಸಂಕಷ್ಟಕ್ಕೆ ತುತ್ತಾಗಿರುವ ಜಾನಪದ ಕಲಾವಿದರಿಗೆ ಆಹಾರದ ಕಿಟ್‍ಗಳನ್ನು ವಿತರಿಸಲಾಯಿತು.
ಶ್ರೀ ಬಸವೇಶ್ವರ ಭಜನಾ ಸಂಘದ ಅಧ್ಯಕ್ಷ ಬಿ.ಪಿ.ಪರಮೇಶ್ವರಪ್ಪ ಅವರನ್ನು ಸನ್ಮಾನಿಸಲಾಯಿತು. ಗ್ರಾಮದ ಶ್ರೀ ಬಸವೇಶ್ವರ ಭಜನಾ ಸಂಘ ಮತ್ತು ಶ್ರೀ ಶನೇಶ್ವರ ಭಜನಾ ಮಂಡಳಿಯಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಯಿತು.
ಜಿ.ಪಂ ಸದಸ್ಯ ರವೀಂದ್ರ ಬೆಳವಾಡಿ, ಗ್ರಾ.ಪಂ.ಅಧ್ಯಕ್ಷೆ ಮಹಾಲಕ್ಷ್ಮಮ್ಮ, ಡಾ|| ಎಸ್.ವಿನಾಯಕ, ನಿವೃತ್ತ ಮುಖ್ಯ ಶಿಕ್ಷಕ ಕೆ.ಎಂ.ಕೇಶವಮೂರ್ತಿ, ಉಪನ್ಯಾಸಕ ಸಂದೀಪ್, ಗ್ರಾಮದ ಮುಖಂಡರಾದ ಬೀರೇಗೌಡ, ಶಂಕರೇಗೌಡ ಉಪಸ್ಥಿತರಿದ್ದರು.
ಪ್ರಕಾಶ್ ಕುಮಾರ್ ಕಾರ್ಯಕ್ರಮವನ್ನು ನಿರೂಪಿಸಿದರು, ಜಾನಪದ ಪರಿಷತ್ತಿನ ಪ್ರಧಾನ ಕಾರ್ಯದರ್ಶಿ ಜಿ.ಬಿ.ವಿರೂಪಾಕ್ಷ ಸ್ವಾಗತಿಸಿದರು, ನಿವೃತ್ತ ಶಿಕ್ಷಕ ಸಿದ್ದಪ್ಪ ವಂದಿಸಿದರು.