ಚಿಕ್ಕಮಗಳೂರು : ಗ್ರಾ.ಪಂ ನಿಗಧಿಪಡಿಸಿರುವ ಜಾಗದಲ್ಲೇ ನಾಡಕಛೇರಿ ನಿರ್ಮಿಸುವಂತೆ ಜಿಲ್ಲಾ ಪಂಚಾಯಿತಿಗೆ ವಸ್ತಾರೆ ಗ್ರಾಮಸ್ಥರ ಒತ್ತಾಯ…

198
firstsuddi

ಚಿಕ್ಕಮಗಳೂರು : ತಾಲ್ಲೂಕಿನ ವಸ್ತಾರೆಯಲ್ಲಿ ಸ್ಥಳೀಯ ಗ್ರಾಮ ಪಂಚಾಯಿತಿ ನಿಗಧಿಪಡಿಸಿರುವ ಜಾಗದಲ್ಲೇ ನಾಡಕಛೇರಿ ಮತ್ತು ಕೃಷಿ ಇಲಾಖೆ ಕಛೇರಿಯನ್ನು ನಿರ್ಮಿಸುವಂತೆ ಗ್ರಾಮಸ್ಥರು ಜಿಲ್ಲಾ ಪಂಚಾಯಿತಿಯನ್ನು ಒತ್ತಾಯಿಸಿದ್ದಾರೆ.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್.ಹೆಚ್.ದೇವರಾಜ್ ಅವರ ನೇತೃತ್ವದಲ್ಲಿ ಜಿಲ್ಲಾ ಪಂಚಾಯಿತಿ ಉಪಕಾರ್ಯದರ್ಶಿ ನಾಗರಾಜ್ ಅವರನ್ನು ಭೇಟಿ ಮಾಡಿದ ಗ್ರಾಮಸ್ಥರು ಈ ಸಂಬಂಧ ಮನವಿ ಸಲ್ಲಿಸಿದರು.
ವಸ್ತಾರೆಯಲ್ಲಿ ಈಗಿರುವ ನಾಡ ಕಛೇರಿ ಮತ್ತು ಕೃಷಿ ಇಲಾಖೆಯ ಕಟ್ಟಡ ಶಿಥಿಲಗೊಂಡಿದ್ದು, ಆ ನೆಪದಲ್ಲಿ ಎರಡೂ ಕಛೇರಿಯನ್ನು ಬೇರೆಡೆಗೆ ಸ್ಥಳಾಂತರಿಸುವ ಹುನ್ನಾರ ನಡೆಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಗ್ರಾಮಸ್ಥರು ಹಿಂದಿನ ಗ್ರಾಮ ಪಂಚಾಯಿತಿ ನಾಡ ಕಛೇರಿ ಮತ್ತು ಕೃಷಿ ಇಲಾಖೆ ಕಟ್ಟಡಕ್ಕಾಗಿ ಗ್ರಾಮದಲ್ಲಿ ಒಂದು ಎಕರೆ ಜಾಗವನ್ನು ಗುರುತಿಸಿದ್ದು, ಅದೇ ಜಾಗದಲ್ಲೇ ನಿರ್ಮಿಸಬೇಕು ಎಂದು ಆಗ್ರಹಿಸಿದರು.
ನಾಡ ಕಛೇರಿ ಮತ್ತು ಕೃಷಿ ಇಲಾಖೆ ಕಛೇರಿಯನ್ನು ಬೇರೆಡೆಗೆ ಸ್ಥಳಾಂತರಿಸಿದರೆ ಸುತ್ತಮುತ್ತಲ ಗ್ರಾಮಗಳ ಜನರಿಗೆ ತೊಂದರೆಯಾಗುತ್ತದೆ ಎಂದು ತಿಳಿಸಿದರು. ಸಮುದಾಯ ಭವನ ನಿರ್ಮಾಣಕ್ಕಾಗಿ ಈಗಾಗಲೇ ಗ್ರಾಮದಲ್ಲಿ ಜಾಗ ಗುರುತಿಸಿ ತಳಪಾಯ ಸಹ ಹಾಕಲಾಗಿದೆ ಆದರೆ ಕೆಲವರು ಶಾಸಕರಿಗೆ ತಪ್ಪು ಮಾಹಿತಿ ನೀಡಿ ಆ ಸ್ಥಳದಲ್ಲಿ ನೆಮ್ಮದಿ ಕೇಂದ್ರ ನಿರ್ಮಿಸಲು ಒತ್ತಡ ಹಾಕುತ್ತಿದ್ದಾರೆ ಎಂದು ಆರೋಪಿಸಿದರು.
ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಗುರುತಿಸಿರುವ ಸ್ಥಳದಲ್ಲೇ ನಾಡ ಕಛೇರಿ ಮತ್ತು ಕೃಷಿ ಇಲಾಖೆ ಕಛೇರಿಯನ್ನು ನಿರ್ಮಿಸಬೇಕು, ಈಗಾಗಲೇ ತಳಪಾಯ ಹಾಕಿರುವ ಜಾಗದಲ್ಲೇ ಸಮುದಾಯ ಭವನವನ್ನು ನಿರ್ಮಿಸಲು ನಿರ್ದೇಶನ ನೀಡಬೇಕು ಎಂದು ಆಗ್ರಹಿಸಿದರು.
ವಸ್ತಾರೆ ಗ್ರಾಮ ಪಂಚಾಯಿತಿ ಮಾಜಿ ಅಧ್ಯಕ್ಷ ವಿ.ಪಿ.ರವಿ, ತಾಲ್ಲೂಕು ಪಂಚಾಯಿತಿ ಸದಸ್ಯ ಡಿ.ಜೆ.ಸುರೇಶ್, ವ್ಯವಸಾಯ ಸೇವಾ ಸಹಕಾರ ಸಂಘದ ಮಾಜಿ ಅಧ್ಯಕ್ಷ ವಿ.ಪಿ.ಕೃಷ್ಣೇಗೌಡ, ಗ್ರಾಮಸ್ಥರಾದ ಕೌಶಿಕ್, ನಾಗೇಶ್, ವಸಂತಕುಮಾರ್, ಧರ್ಮೇಂದ್ರ, ಜೆಡಿಎಸ್ ಜಿಲ್ಲಾ ಕಾರ್ಯದರ್ಶಿ ಪದ್ಮಯ್ಯ ಹಾಜರಿದ್ದರು.