ಚಿಕ್ಕಮಗಳೂರು : ಜನಮಾನಸದಿಂದ ಮರೆಯಾಗುತ್ತಿರುವ ಜಾನಪದದ ಮಹತ್ವವನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು : ಡಾ|| ಮಂಜುಳಾ ಹುಲ್ಲಹಳ್ಳಿ.

286
firstsuddi

ಚಿಕ್ಕಮಗಳೂರು : ಆಧುನಿಕತೆಯ ಅಬ್ಬರದಲ್ಲಿ ಜನಮಾನಸದಿಂದ ಮರೆಯಾಗುತ್ತಿರುವ ಜಾನಪದವನ್ನು ಉಳಿಸುವ ನಿಟ್ಟಿನಲ್ಲಿ ಅದರ ಮಹತ್ವ ಮತ್ತು ಅಗತ್ಯವನ್ನು ಇಂದಿನ ಪೀಳಿಗೆಗೆ ತಿಳಿಸುವ ಕೆಲಸವಾಗಬೇಕು ಎಂದು ಯುವಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಉಪನಿರ್ದೇಶಕಿ ಡಾ|| ಮಂಜುಳಾ ಹುಲ್ಲಹಳ್ಳಿ ಸಲಹೆ ಮಾಡಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಘಟಕ ನಗರದ ಆಜಾದ್ ಪಾರ್ಕ್ ಗಣಪತಿ ಪೆಂಡಾಲಿನಲ್ಲಿ ಶುಕ್ರವಾರ ಏರ್ಪಡಿಸಿದ್ದ ಜಾನಪದ ಸಂಭ್ರಮ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಜಾನಪದದ ಅಗತ್ಯ ಮತ್ತು ಮಹತ್ವದ ಬಗ್ಗೆ ಇಂದಿನ ಪೀಳಿಗೆಗೆ ಅರಿವಿಲ್ಲ, ಇದರಿಂದಾಗಿ ಅವರು ಪಾಶ್ಚಾತ್ಯ ಸಂಸ್ಕøತಿಯತ್ತ ವಾಲುತ್ತಿದ್ದಾರೆ, ಜಾನಪದದ ಮಹತ್ವವನ್ನು ಅವರಿಗೆ ಮನದಟ್ಟಾಗುವಂತೆ ತಿಳಿಸಿದಲ್ಲಿ ಮತ್ತೆ ದೇಶಿಯ ಸಂಸ್ಕøತಿಯತ್ತ ಮರಳುತ್ತಾರೆ ಎಂದು ಹೇಳಿದರು.
ಕರ್ನಾಟಕ ಜಾನಪದ ಪರಿಷತ್ತಿನ ಜಿಲ್ಲಾ ಗೌರವಾಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ ಮಾತನಾಡಿ ಮರೆಯಾಗುತ್ತಿರುವ ಜಾನಪದವನ್ನು ಉಳಿಸುವ ಉದ್ದೇಶದಿಂದ ಪರಿಷತ್ತಿನಿಂದ ನಿರಂತರವಾಗಿ ಜಾನಪದ ಅರಿವು ಕಾರ್ಯಕ್ರಮವನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಪರಿಷತ್ತಿನ ಜಿಲ್ಲಾಧ್ಯಕ್ಷ ಜಿ.ಬಿ.ಸುರೇಶ್ ಜಾನಪದ ಕಲೆ, ಸಾಹಿತ್ಯ ಮತ್ತು ಸಂಸ್ಕøತಿಯನ್ನು ಉಳಿಸು ನಿಟ್ಟಿನಲ್ಲಿ ಸಾರ್ವಜನಿಕ ಗಣಪತಿ ಉತ್ಸವಗಳಲ್ಲಿ ಜಾನಪದ ಕಾರ್ಯಕ್ರಮಗಳಿಗೆ ಹೆಚ್ಚು ಅವಕಾಶ ನೀಡಬೇಕು ಎಂದು ಮನವಿ ಮಾಡಿದರು.
ಇದೇ ವೇಳೆ ಜಿಲ್ಲೆಯ ವಿವಿಧ ಭಾಗಗಳ ಜಾನಪದ ಕಲಾವಿದರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಪರಿಷತ್ತಿನ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಜಿ.ಬಿ.ವಿರೂಪಾಕ್ಷ, ಆಜಾದ್ ಪಾರ್ಕ್ ಗಣಪತಿ ಸೇವಾ ಸಮಿತಿಯ ಗೌರವಾಧ್ಯಕ್ಷ ಏಕಾಂತರಾಮು, ಆದಿಚುಂಚನಗಿರಿ ವಿವಿಯ ರಿಜಿಸ್ಟ್ರಾರ್ ಡಾ|| ಸಿ.ಕೆ.ಸುಬ್ರಾಯ, ಕಲಾವಿದರಾದ ಹರಿಣಾಕ್ಷಿ, ಜ್ಯೋತಿ ವಿನೀತ್‍ಕುಮಾರ್, ಶೈಲಜಾ, ಬಕ್ಕಿ ಮಂಜುನಾಥ್ ಉಪಸ್ಥಿತರಿದ್ದರು.
ವಾಸಂತಿ ಪದ್ಮನಾಭ್ ಕಾರ್ಯಕ್ರಮವನ್ನು ನಿರೂಪಿಸಿದರು, ಮೇಕನಗದ್ದೆ ಲಕ್ಷ್ಮಣಗೌಡ ಸ್ವಾಗತಿಸಿದರು, ಉಪನ್ಯಾಸಕ ಸಂದೀಪ್ ವಂದಿಸಿದರು.