ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂ ಸ್ಟೇಗಳ ನೋಂದಣಿ ಕಡ್ಡಾಯ : ಡಾ. ಬಗಾದಿ ಗೌತಮ್.

446
firstsuddi

ಚಿಕ್ಕಮಗಳೂರು : ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಹೋಂ ಸ್ಟೇಗಳು ಸರ್ಕಾರದ ಆದೇಶದಂತೆ ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳುವುದು ಕಡ್ಡಾಯವಾಗಿರುತ್ತದೆ ಎಂದು ಜಿಲ್ಲಾಧಿಕಾರಿ ಡಾ. ಬಗಾದಿ ಗೌತಮ್ ಅವರು ತಿಳಿಸಿದ್ದಾರೆ.
ಜಿಲ್ಲೆಯಲ್ಲಿ ಕೆಲವೊಂದು ಅನಧಿಕೃತವಾಗಿ ನಡೆಯುತ್ತಿರುವ ಹೋಂ ಸ್ಟೇಗಳ ಬಗ್ಗೆ ಜಿಲ್ಲಾಡಳಿತಕ್ಕೆ ದೂರುಗಳು ಕೇಳಿಬಂದಿದ್ದು, ಪ್ರವಾಸೋಧ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳದೆ ಅಧಿಕೃತವಾಗಿ ಕಾರ್ಯನಿರ್ವಹಿಸುವುದು ಗಂಭೀರ ಎಂದು ಪರಿಗಣಿಸಿದೆ. ಆದ್ದರಿಂದ ಪ್ರವಾಸೋಧ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಳ್ಳದ ಹೋಂ ಸ್ಟೇಗಳು ನವೆಂಬರ್ 30ರ ಒಳಗಾಗಿ ಪ್ರವಾಸೋದ್ಯಮ ಇಲಾಖೆಯ ಅಂತರ್ಜಾಲ ತಾಣದಲ್ಲಿ ನೋಂದಣಿ ಮಾಡಿಕೊಂಡು ಇಲಾಖೆಯ ಅನುಮೋದನೆ ಪಡೆಯಲು ತಿಳಿಸಲಾಗಿದೆ.
ಈಗಾಗಲೇ ಪ್ರವಾಸೋಧ್ಯಮ ಇಲಾಖೆಯ ಅಂತರ್ಜಾಲ ತಾಣದಲ್ಲಿ ಹೋಂ ಸ್ಟೇಗಳನ್ನು ನೋಂದಣಿ ಮಾಡಿಕೊಂಡಿರುವ ಹೋಂ ಸ್ಟೇಗಳ ಮಾಲೀಕರು ಸಹ ಅಂತರ್ಜಾಲ ತಾಣಗಳಲ್ಲಿ ಅಪ್‍ಲೋಡ್ ಮಾಡಿರುವ ದಾಖಲಾತಿಗಳಾದ ಪೊಲೀಸ್ ಎನ್.ಓ.ಸಿ, ಗ್ರಾಮ ಪಂಚಾಯಿತಿ/ಸ್ಥಳೀಯ ಪ್ರಾಧಿಕಾರದಿಂದ ಪಡೆದ ಎನ್.ಓ.ಸಿ, ಇ-ಖಾತಾ(11ಬಿ/9&11ಎ), ಮಾಲೀಕತ್ವದ ಆರ್.ಟಿ.ಸಿ, ನೋಂದಣಿ ಶುಲ್ಕ ಪಾವತಿಸಿದ ರಶೀದಿ, ಹೋಂ ಸ್ಟೇ ಛಾಯಚಿತ್ರ ಮತ್ತು ಆಧಾರ್ ಕಾರ್ಡ್ ಗಳನ್ನು ಚಿಕ್ಕಮಗಳೂರಿನ ಪ್ರವಾಸೋಧ್ಯಮ ಇಲಾಖೆಯ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸಿ ಹೋಂ ಸ್ಟೇಗಳಿಗೆ ಅನುಮೋದನೆ ಪಡೆಯಲು ತಿಳಿಸಿದ್ದಾರೆ.
2020 ನವೆಂಬರ್ ಅಂತ್ಯದೊಳಗಾಗಿ ಪ್ರವಾಸೋಧ್ಯಮ ಇಲಾಖೆಯ ಅಂತರ್ಜಾಲ ತಾಣದಲ್ಲಿ ಹೋಂ ಸ್ಟೇ ನೋಂದಣಿ ಮಾಡಿಕೊಂಡು ಅನುಮೋದನೆ ಪಡೆಯದಿದ್ದಲ್ಲಿ ಅಂತಹ ಹೋಂ ಸ್ಟೇಗಳ ಮಾಲೀಕರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಜಿಲ್ಲಾಧಿಕಾರಿಗಳ ಕಚೇರಿ ಪ್ರಕಟಣೆಯಲ್ಲಿ ತಿಳಿಸಲಾಗಿದೆ.