ಚಿಕ್ಕಮಗಳೂರು : ನರ್ಸಿಂಗ್ ವೃತ್ತಿಗೆ ಸೇರಬಯಸುವವರು ಮಾತೃ ಹೃದಯ ಹೊಂದಿರಬೇಕು : ಷಡಕ್ಷರಿ.

291
firstsuddi

ಚಿಕ್ಕಮಗಳೂರು : ನರ್ಸಿಂಗ್ ವೃತ್ತಿಗೆ ಸೇರಬಯಸುವವರು ಮಾತೃ ಹೃದಯ ಹೊಂದಿರಬೇಕು ಎಂದು ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಮುಖ್ಯ ಆಯುಕ್ತ ಷಡಕ್ಷರಿ ಸಲಹೆ ಮಾಡಿದರು.
ನಗರದ ಆಶ್ರಯ ನರ್ಸಿಂಗ್ ಕಾಲೇಜಿನಲ್ಲಿ ಭಾನುವಾರ ನಡೆದ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಸ್ವೀಕಾರ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ನರ್ಸಿಂಗ್ ಕೆಲಸ ವೃತ್ತಿಯಲ್ಲ ಅದೊಂದು ಸೇವೆ, ಅದನ್ನು ಶ್ರದ್ದೆಯಿಂದ ಮಾಡಿದರೆ ಬದುಕು ಸಾರ್ಥಕವಾಗುತ್ತದೆ, ವೈದ್ಯರು ರೋಗಿಗಳ ಬಳಿ ಸದಾ ಕಾಲ ಇರಲು ಸಾಧ್ಯವಾಗುವುದಿಲ್ಲ ಆದರೆ ನರ್ಸ್‍ಗಳು ಯಾವಾಗಲೂ ರೋಗಿಗಳೊಂದಿಗೆ ಇರುತ್ತಾರೆ ಹಾಗಾಗಿ ಅವರ ಕಾರ್ಯ ಅತ್ಯಂತ ಜವಾಬ್ದಾರಿಯುತವಾದುದು ಎಂದರು.
ಕೇವಲ ಔಷಧಿಗಳಿಂದ ಮಾತ್ರ ರೋಗಿಗಳ ಕಾಯಿಲೆ ಗುಣವಾಗುವುದಿಲ್ಲ, ದಾದಿಯರ ನಗುಮುಖದ ಸೇವೆ ರೋಗಿಗಳಲ್ಲಿ ಚೈತನ್ಯ ತುಂಬುತ್ತದೆ, ಅವರನ್ನು ಪ್ರೀತಿ, ವಾತ್ಸಲ್ಯ ಮತ್ತು ಶ್ರದ್ದೆಯಿಂದ ನೋಡಿಕೊಂಡರೆ ಮಾತ್ರ ಗುಣಮುಖರಾಗುತ್ತಾರೆ ಎಂದ ಅವರು ಹಾಗಾಗಿ ನರ್ಸ್‍ಗಳು ಸೇವಾ ಮನೋಭಾವ, ಹೃದಯವಂತಿಕೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಅಧ್ಯಕ್ಷ ಡಾ|| ಡಿ.ಎಲ್.ವಿಜಯಕುಮಾರ್ ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಿದರೆ ಮಾತ್ರ ಉತ್ತಮ ನರ್ಸ್‍ಗಳಾಗಿ ಹೊರಹೊಮ್ಮಲು ಸಾಧ್ಯವಾಗುತ್ತದೆ ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾಲೇಜಿನಲ್ಲಿರುವ ಎಲ್ಲಾ ಸವಲತ್ತುಗಳನ್ನೂ ವಿದ್ಯಾರ್ಥಿಗಳು ಸಮರ್ಪಕವಾಗಿ ಬಳಸಿಕೊಳ್ಳಬೇಕು, ಶ್ರದ್ದೆಯಿಂದ ವಿದ್ಯಾರ್ಜನೆ ಮಾಡುವ ಮೂಲಕ ಸಂಸ್ಥೆಗೆ ಕೀರ್ತಿ ತರಬೇಕು ಎಂದು ಮನವಿ ಮಾಡಿದರು.

ಕಾಲೇಜಿನ ನಿರ್ದೇಶಕಿ ಡಾ|| ಶುಭಾ ವಿಜಯ್ ವಿದ್ಯಾರ್ಥಿಗಳಿಗೆ ಪ್ರತಿಜ್ಞಾ ವಿಧಿ ಬೋಧಿಸಿದರು, ಸಂಸ್ಥೆಯಿಂದ ಹೊರತರಲಾದ ನೂತನ ವರ್ಷದ ಕ್ಯಾಲೆಂಡರ್‍ನ್ನು ಸಮಾರಂಭದಲ್ಲಿ ಬಿಡುಗಡೆಗೊಳಿಸಲಾಯಿತು.
ಕಾಲೇಜಿನ ನಿರ್ದೇಶಕ ಡಾ|| ಅನಿಕೇತ್, ಪ್ರಾಚಾರ್ಯೆ ಶೃತಿ, ಉಪನ್ಯಾಸಕಿ ತಬುಸಂ ಉಪಸ್ಥಿತರಿದ್ದರು.