ಚಿಕ್ಕಮಗಳೂರು : ಲಯನ್ಸ್ ಕ್ಲಬ್ ಸದಸ್ಯರಿಂದ ನೆರೆ ಸಂತ್ರಸ್ಥರಿಗೆ ನೆರವು ನೀಡಲಾಗುವುದು : ಸಿ.ಪಿ.ಸುರೇಶ್.

327
firstsuddi

ಚಿಕ್ಕಮಗಳೂರು : ಪ್ರಕೃತಿ ವಿಕೋಪ ಸಂತ್ರಸ್ಥರ ನೆರವಿಗಾಗಿ ಲಯನ್ಸ್ ಕ್ಲಬ್‍ನ ಪದಾಧಿಕಾರಿಗಳು ಮತ್ತು ಸದಸ್ಯರಿಂದ ಒಂದೂ ಕಾಲು ಲಕ್ಷ ರೂ ಸಂಗ್ರಹವಾಗಿದ್ದು, ಅದನ್ನು ಸದ್ಯದಲ್ಲೇ ಸಂತ್ರಸ್ಥರಿಗೆ ನೀಡಲಾಗುವುದು ಎಂದು ಕ್ಲಬ್‍ನ ಅಧ್ಯಕ್ಷ ಸಿ.ಪಿ.ಸುರೇಶ್ ಹೇಳಿದರು.
ಲಯನ್ಸ್ ಕ್ಲಬ್, ಇನ್ನರ್ ವ್ಹೀಲ್ ಕ್ಲಬ್, ಪೂರ್ವಿ ಸುಗಮ ಸಂಗೀತ ಅಕಾಡಮಿ ಮತ್ತು ಯುರೇಕಾ ಅಕಾಡಮಿ ವತಿಯಿಂದ ಪ್ರಕೃತಿ ವಿಕೋಪ ಸಂತ್ರಸ್ಥರ ಸಹಾಯಾರ್ಥ ನಗರದ ಲಯನ್ಸ್ ಸೇವಾ ಭವನದಲ್ಲಿ ಸೋಮವಾರ ಏರ್ಪಡಿಸಿದ್ದ ಗೀತಗಾಯನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಗೀತಗಾಯನ ಕಾರ್ಯಕ್ರಮದಿಂದ ಸಂಗ್ರಹವಾದ ಹಣವನ್ನೂ ಸಂತ್ರಸ್ಥರಿಗೆ ನೀಡಲಾಗುವುದು ಎಂದ ಅವರು ಕ್ಲಬ್‍ನ ಮನವಿಗೆ ಸ್ಪಂದಿಸಿ ದೇಣಿಗೆ ನೀಡಿದ ದಾನಿಗಳು ಮತ್ತು ಸಾರ್ವಜನಿಕರಿಗೆ ಕೃತಜ್ಞತೆ ಸಲ್ಲಿಸಿದರು.
ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಲಯನ್ಸ್ ಜಿಲ್ಲಾ ಮಾಜಿ ರಾಜ್ಯಪಾಲ ಹೆಚ್.ಆರ್.ಹರೀಶ್ ಪ್ರಕೃತಿ ವಿಕೋಪದಿಂದ ಮನೆ ಕಳೆದುಕೊಂಡಿರುವ ಮೂಡಿಗೆರೆ ತಾಲ್ಲೂಕಿನ ಮಲೆಮನೆಯ ಐದೂ ಕುಟುಂಬಗಳಿಗೆ ಹೆಚ್ಚಿನ ನೆರವು ಒದಗಿಸಲಾಗುವುದು ಎಂದು ತಿಳಿಸಿದರು.
ಪ್ರಕೃತಿ ವಿಕೋಪದ ವೇಳೆ ಸಾವಿಗೀಡಾದವರ ಆತ್ಮಕ್ಕೆ ಶಾಂತಿಕೋರಿ ಒಂದು ನಿಮಿಷ ಮೌನಾಚರಣೆ ಮಾಡಲಾಯಿತು. ಪೂರ್ವಿ ಸುಗಮ ಸಂಗೀತ ಅಕಾಡಮಿಯ ಗಾಯಕರಿಂದ ಇದೇ ವೇಳೆ ನಡೆದ ಹಳೆಯ ಗೀತೆಗಳ ಗಾಯನ ಸಾರ್ವಜನಿಕರ ಗಮನ ಸೆಳೆಯಿತು.
ಆಶಾ ಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ|| ಜೆ.ಪಿ.ಕೃಷ್ಣೇಗೌಡ, ಇನ್ನರ್ ವ್ಹೀಲ್ ಕ್ಲಬ್ ಅಧ್ಯಕ್ಷೆ ದಿವ್ಯಾ ವಿಕ್ರಂ, ಪೂರ್ವಿ ಸುಗಮ ಸಂಗೀತ ಅಕಾಡಮಿಯ ಉಪಾಧ್ಯಕ್ಷೆ ಕವಿತಾ ನಿಯತ್, ಲಯನ್ಸ್ ಕಾರ್ಯದರ್ಶಿ ಮನೋಜ್ ಬಸವರಾಜ್, ಖಜಾಂಚಿ ಜಯರಾಮೇಗೌಡ, ಯುರೇಕಾ ಅಕಾಡಮಿ ಅಧ್ಯಕ್ಷ ದೀಪಕ್ ದೊಡ್ಡಯ್ಯ, ಎಂ.ಎಸ್.ಸುಧೀರ್ ಉಪಸ್ಥಿತರಿದ್ದರು.