ಚಿಕ್ಕಮಗಳೂರು : ಲಾಕ್‍ಡೌನ್‍ನಿಂದಾಗಿ ಸಂಕಷ್ಟದಲ್ಲಿರುವ ಖಾಸಗಿ ಅನುದಾನ ರಹಿತ ಶಾಲೆಗಳ ಬಗ್ಗೆ ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರ ಮೃದುಧೋರಣೆ ತಾಳಬೇಕು : ಎಸ್.ಎಲ್.ಭೋಜೇಗೌಡ.

200
firstsuddi

ಚಿಕ್ಕಮಗಳೂರು : ಲಾಕ್‍ಡೌನ್‍ನಿಂದಾಗಿ ಆರ್ಥಿಕವಾಗಿ ಸಂಕಷ್ಟದಲ್ಲಿರುವ ಖಾಸಗಿ ಅನುದಾನ ರಹಿತ ಶಾಲೆಗಳ ಬಗ್ಗೆ ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರ ಮೃದುಧೋರಣೆ ತಾಳಬೇಕು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಸಲಹೆ ಮಾಡಿದರು.
ನಗರದ ಡಿಸಿಸಿ ಬ್ಯಾಂಕ್ ಸಭಾಂಗಣದಲ್ಲಿ ಜಿಲ್ಲಾ ಖಾಸಗಿ ಅನುದಾನ ರಹಿತ ಶಾಲೆಗಳ ಒಕ್ಕೂಟ ಗುರುವಾರ ಏರ್ಪಡಿಸಿದ್ದ ಅನುದಾನ ರಹಿತ ಖಾಸಗಿ ಶಾಲೆಗಳ ಮುಖ್ಯಸ್ಥರ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆರಳೆಣಿಕೆಯಷ್ಟು ಖಾಸಗಿ ಅನುದಾನ ರಹಿತ ಶಾಲೆಗಳು ದುಬಾರಿ ಶುಲ್ಕ ಪಡೆಯುತ್ತಿದ್ದರೆ ಬಹಳಷ್ಟು ಶಾಲೆಗಳು ಕಡಿಮೆ ಶುಲ್ಕ ಪಡೆದು ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದರ ಜೊತೆಗೆ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡುತ್ತಿವೆ, ಲಾಕ್‍ಡೌನ್‍ನಿಂದಾಗಿ ಶಾಲೆಗಳು ಸ್ಥಗಿತಗೊಂಡ ಪರಿಣಾಮ ಶಿಕ್ಷಕರಿಗೆ ವೇತನ ನೀಡಲಾಗದೇ ಅವು ಪರದಾಡುತ್ತಿವೆ ಎಂದು ವಿಷಾದಿಸಿದರು.
ಈ ಹಿನ್ನೆಲೆಯಲ್ಲಿ ಶಿಕ್ಷಣ ಇಲಾಖೆ ಮತ್ತು ರಾಜ್ಯ ಸರ್ಕಾರ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ನೆರವಿನ ಹಸ್ತ ಚಾಚಬೇಕು, ಕಡ್ಡಾಯ ಶಿಕ್ಷಣ ಕಾಯ್ದೆಯಡಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳ ಶುಲ್ಕವನ್ನು ರಾಜ್ಯ ಸರ್ಕಾರ ಕೂಡಲೇ ಬಿಡುಗಡೆ ಮಾಡಬೇಕು, ಹಾಗೆ ಮಾಡಿದರೆ ಮಾತ್ರ ಖಾಸಗಿ ಶಾಲೆಗಳು ಶಿಕ್ಷಕರಿಗೆ ವೇತನ ನೀಡಲು ಸಾಧ್ಯವಾಗುತ್ತದೆ ಎಂದರು.
6ನೇ ವೇತನ ಆಯೋಗದ ಶಿಫಾರಸ್ಸನ್ನು ಜಾರಿಗೆ ತರುವಂತೆ ಶಿಕ್ಷಣ ಇಲಾಖೆ ಖಾಸಗಿ ಅನುದಾನ ರಹಿತ ಶಾಲೆಗಳಿಗೆ ಕಳುಹಿಸಿರುವ ಸುತ್ತೋಲೆಯನ್ನು ಹಿಂಪಡೆಯಬೇಕು, ಪ್ರಧಾನ ಮಂತ್ರಿಗಳ ವಿಶೇಷ ಪ್ಯಾಕೇಜ್ ಅಡಿಯಲ್ಲಿ ಈ ಶಾಲೆಗಳಿಗೆ ಆರ್ಥಿಕ ಸಹಾಯ ನೀಡಬೇಕು ಎಂದು ಒತ್ತಾಯಿಸಿದರು.
ಇದೇ ವೇಳೆ ಜಿಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದಿಂದ ಖಾಸಗಿ ಶಾಲೆಗಳ ಸಮಸ್ಯೆಗಳಿಗೆ ಸ್ಪಂದಿಸುವಂತೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭದಲ್ಲಿ ತಮ್ಮ ಸಮಸ್ಯೆಗಳನ್ನು ವಿವರಿಸಿದ ಖಾಸಗಿ ಅನುದಾನ ರಹಿತ ಶಾಲೆಗಳ ಮುಖ್ಯಸ್ಥರು ಖಾಸಗಿ ಶಾಲೆಗಳಿಗೆ ರಾಜ್ಯ ಸರ್ಕಾರ ಅನುದಾನ, ಆರ್ಥಿಕ ನೆರವು ನೀಡಬೇಕು, ಸರ್ಕಾರಿ ಮತ್ತು ಖಾಸಗಿ ಶಾಲೆಗಳಿಗೆ ಒಂದೇ ಕಾನೂನು ಮತ್ತು ನೀತಿಯನ್ನು ರೂಪಿಸಬೇಕು, ಶಿಕ್ಷಣ ಇಲಾಖೆ ಅಧಿಕಾರಿಗಳ ಕಿರುಕುಳದಿಂದ ಮುಕ್ತಿ ನೀಡಬೇಕು ಎಂದು ಒತ್ತಾಯಿಸಿದರು.
ಮನವಿ ಸ್ವೀಕರಿಸಿ ಮಾತನಾಡಿದ ಎಸ್.ಎಲ್.ಭೋಜೇಗೌಡ ಅನುದಾನ ರಹಿತ ಖಾಸಗಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸುವುದರ ಜೊತೆಗೆ ಅವುಗಳ ನಿವಾರಣೆಗೆ ಶಕ್ತಿಮೀರಿ ಪ್ರಯತ್ನಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾ ಅನುದಾನ ರಹಿತ ಖಾಸಗಿ ಶಾಲೆಗಳ ಒಕ್ಕೂಟದ ಅಧ್ಯಕ್ಷ ಬಿ.ಹೆಚ್.ನರೇಂದ್ರ ಪೈ, ಉಪಾಧ್ಯಕ್ಷ ರಮೇಶ್, ಕಾರ್ಯದರ್ಶಿ ನಂದಕುಮಾರ್, ಸಹಕಾರ್ಯದರ್ಶಿ ಮಹಮದ್ ಗೌಸ್, ನಿರ್ದೇಶಕರಾದ ಎಂ.ಎನ್.ಷಡಕ್ಷರಿ, ಶ್ರೀನಿವಾಸ್, ಕುಳ್ಳೇಗೌಡ, ಶಂಕರ ವಿದ್ಯಾಮಂದಿರದ ಶ್ರೀ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿ, ಕುವೆಂಪು ವಿದ್ಯಾನಿಕೇತನದ ಕಾರ್ಯದರ್ಶಿ ಶಂಕರ್ ಹಾಜರಿದ್ದರು.