ಚಿಕ್ಕಮಗಳೂರು : ವಿದ್ಯಾವಂತರಾದರೆ ಮಾತ್ರ ಬಡತನದಿಂದ ಹೊರಬಂದು ನೆಮ್ಮದಿಯಾಗಿ ಬದುಕಲು ಸಾಧ್ಯ ಎಂದು ಗ್ರಾಮಾಂತರ ವೃತ್ತ ನಿರೀಕ್ಷಕಿ ಜಿ.ಎಸ್.ಸ್ವರ್ಣ ಹೇಳಿದರು.
ಇಲ್ಲಿನ ಕಲ್ಯಾಣನಗರದ ಐಡಿಯಲ್ ಪ್ಲೇ ಅಬಾಕಸ್ ಅಕಾಡೆಮಿಯಲ್ಲಿ ನಿನ್ನೆ ನಡೆದ ಸಮಾರಂಭದಲ್ಲಿ ಇತ್ತೀಚೆಗೆ ನಡೆದ ರಾಜ್ಯ ಮಟ್ಟದ ಸ್ಪೀಡ್ ಅರ್ಥಮೆಟಿಕ್ ಪರೀಕ್ಷೆಯಲ್ಲಿ ಉತ್ತೀರ್ಣರಾದ ಸಂಸ್ಥೆಯ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಅವರು ಮಾತನಾಡಿದರು.
ಬಡತನವನ್ನು ಹೋಗಲಾಡಿಸಲು ಶಿಕ್ಷಣ ಬ್ರಹ್ಮಾಸ್ತ್ರವಿದ್ದಂತೆ, ವಿದ್ಯಾವಂತರಾಗುವುದರಿಂದ ಸಮಾಜದಲ್ಲಿ ಗೌರವ, ಉನ್ನತ ಸ್ಥಾನಮಾನ ದೊರೆಯುತ್ತದೆ, ದೌರ್ಜನ್ಯ ಮತ್ತು ಶೋಷಣೆಯಿಂದ ಮುಕ್ತರಾಗಲು ಶಿಕ್ಷಣ ಅತ್ಯಂತ ಅಗತ್ಯ ಎಂದು ಕಿವಿಮಾತು ಹೇಳಿದರು.
ನಾವು ಗಳಿಸಿದ ಹಣ, ಆಸ್ತಿ, ಅಧಿಕಾರ, ಅಂತಸ್ತು ಶಾಶ್ವತವಲ್ಲ ಆದರೆ ನಾವು ಗಳಿಸಿದ ವಿದ್ಯೆ ಜೀವನ ಪೂರ್ತಿ ನಮ್ಮ ಜೊತೆಗಿರುತ್ತದೆ ಎಂದ ಅವರು ಮಕ್ಕಳು ಇದನ್ನು ಅರಿತು ಶ್ರದ್ದೆ ಮತ್ತು ಪರಿಶ್ರಮದಿಂದ ವಿದ್ಯಾರ್ಜನೆ ಮಾಡಬೇಕು ಎಂದು ಸಲಹೆ ಮಾಡಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿಯ ಶಿಕ್ಷಕಿ ಸಸಪವಿತ್ರಾ ದಿನೇಶ್ ಕಳೆದ 10 ವರ್ಷಗಳಿಂದ ಸತತವಾಗಿ ಪ್ರತಿವರ್ಷ ಸಂಸ್ಥೆಯ ವಿದ್ಯಾರ್ಥಿಗಳು ರಾಜ್ಯ ಮಟ್ಟದ ಪರೀಕ್ಷೆಯಲ್ಲಿ ಉನ್ನತ ಶ್ರೇಣಿಯಲ್ಲಿ ತೇರ್ಗಡೆಯಾಗುತ್ತಿದ್ದಾರೆ ಎಂದು ತಿಳಿಸಿದರು.
ರಾಜ್ಯ ಮಟ್ಟದ ಸ್ಪೀಡ್ ಅರ್ಥಮೆಟಿಕ್ ಪರೀಕ್ಷೆಯಲ್ಲಿ ಅತ್ಯುನ್ನತ ಶ್ರೇಣಿಯಲ್ಲಿ ಉತ್ತೀರ್ಣರಾದ ಸಂಸ್ಥೆಯ 9 ವಿದ್ಯಾರ್ಥಿಗಳಿಗೆ ಸಮಾರಂಭದಲ್ಲಿ ಬಹುಮಾನ ನೀಡಿ ಸನ್ಮಾನಿಸಲಾಯಿತು.










