ಚಿಕ್ಕಮಗಳೂರು : ವಿವಿಧ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಕಾಫಿನಾಡಲ್ಲಿ ಮಿಶ್ರ ಪ್ರತಿಕ್ರಿಯೆ…

354

ಚಿಕ್ಕಮಗಳೂರು : ವಿವಿಧ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಕಾರ್ಮಿಕ ಸಂಘಟನೆಗಳು ಕರೆ ನೀಡಿದ್ದ ಮುಷ್ಕರಕ್ಕೆ ಕಾಫಿನಾಡಲ್ಲಿ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುವುದರ ಜೊತೆ ಪ್ರತಿಭಟನಾ ಮೆರವಣಿಗೆಯೂ ಶಾಂತಿಯುತವಾಗಿ ಮುಗಿದಿದೆ. ಜಿಲ್ಲಾದ್ಯಂತ ಬೆಳಗ್ಗಿನಿಂದಲೂ ಬಂದ್ ನ ಯಾವುದೇ ಲಕ್ಷಣಗಳಿರಲಿಲ್ಲ. ಜನಜೀವನ ಎಂದಿನಂತೆಯೇ ಆರಂಭಗೊಂಡಿತ್ತು. ಸರ್ಕಾರಿ, ಖಾಸಗಿ ಬಸ್ ಸಂಚಾರ ಕೂಡ ಎಂದಿನಂತೆ ಆರಂಭಗೊಂಡಿತ್ತು. ಅಂಗಡಿ-ಮುಂಗಟ್ಟುಗಳು ಕೂಡ ದಿನನಿತ್ಯದಂತೆ ವ್ಯಾಪಾರ-ವಹಿವಾಟು ನಡೆಸಿದವು. ಮುಂಜಾಗೃತ ಕ್ರಮವಾಗಿ ನಗರದ ಅಲ್ಲಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಕೂಡ ಏರ್ಪಡಿಸಲಾಗಿತ್ತು. ಶಾಲಾ-ಕಾಲೇಜಿಗೂ ರಜೆ ಇರಲಿಲ್ಲ. ಪ್ರತಿಭಟನಾಕಾರರು ಹೇಳಿದಂತೆ ಯಾವುದೇ ಅಂಗಡಿ-ಮುಂಗಟ್ಟುಗಳನ್ನು ಬಲವಂತವಾಗಿ ಬಾಗಿಲು ಹಾಕಿಸಲಿಲ್ಲ. ಬೆಳಗ್ಗೆ 11 ಗಂಟೆಗೆ ನಗರದ ಮೆಸ್ಕಾಂ ಕಚೇರಿಯಿಂದ ಪ್ರತಿಭಟನಾ ಮೆರವಣಿಗೆ ಹೋರಾಟ ಮೂರು ಸಾವಿರಕ್ಕೂ ಅಧಿಕ ಕಾರ್ಮಿಕ ಸಂಘಟನೆ ಮುಖಂಡರು ಹಾಗೂ ಕಾರ್ಮಿಕರು ಬಸವನಹಳ್ಳಿ ಮುಖ್ಯ ರಸ್ತೆ, ಎಂ.ಜಿ.ರಸ್ತೆ ಮೂಲಕ ಸಾಗಿ ಆಜಾದ್ ಪಾರ್ಕ್ ಬಳಿ ಮೆರವಣಿಗೆಯನ್ನು ಮುಕ್ತಾಯಗೊಳಿಸಿ, ಬೃಹತ್ ಸಭೆ ನಡೆಸಿದರು. ಮೆರವಣಿಗೆಯುದ್ಧಕ್ಕೂ ಕೇಂದ್ರ ಸರ್ಕಾರ ಹಾಗೂ ಪ್ರಧಾನಿ ಮೋದಿ ವಿರುದ್ಧ ಘೋಷಣೆ ಕೂಗಿದರು. ಮೆರವಣಿಗೆಯಲ್ಲೂ ಪೊಲೀಸರು ಬಿಗಿ ಬಂದೋಬಸ್ತ್ ಕಲ್ಪಿಸಿದರು.