ಚಿಕ್ಕಮಗಳೂರು:ವಿಶ್ವಯೋಗ ದಿನಾಚರಣೆಯನ್ನು ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕದ ಪದಾಧಿಕಾರಿಗಳು ಸರಳವಾಗಿ ಆಚರಿಸಿದರು…

266

ಚಿಕ್ಕಮಗಳೂರು.:ವಿಶ್ವಯೋಗ ದಿನಾಚರಣೆಯನ್ನು ಭಾರತ ಸೇವಾದಳದ ಜ್ಞಾನಜ್ಯೋತಿ ಘಟಕದ ಪದಾಧಿಕಾರಿಗಳು ಇಂದು ಸರಳವಾಗಿ ಆಚರಿಸಿದರು.
ನಗರದ ಆಜಾದ್‍ಪಾರ್ಕ್ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆಯಲ್ಲಿ ಬೆಳಿಗ್ಗೆ ಒಗ್ಗೂಡಿದ ಪದಾಧಿಕಾರಿಗಳು ಸಾಮೂಹಿಕವಾಗಿ ಸೂರ್ಯ ನಮಸ್ಕಾರ ಹಾಗೂ ಯೋಗಾಸನಗಳನ್ನು ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಜಗದೀಶಾಚಾರ್ ಮಾನಸಿಕ ಒತ್ತಡದ ನಿವಾರಣೆಗೆ ಯೋಗ ಅತ್ಯಂತ ಸಹಕಾರಿ, ಪ್ರತಿದಿನ ಯೋಗಾಭ್ಯಾಸ ಮಾಡುವುದರಿಂದ ಧೀರ್ಘಾಯುಷಿಗಳಾಗಿ ಬದುಕಬಹುದು ಎಂದು ಹೇಳಿದರು.
ಯೋಗದಿಂದ ನಿರೋಗಿಗಳಾಗಬಹುದು, ಮಾನಸಿಕ ಮತ್ತು ದೈಹಿಕವಾಗಿ ಸಧೃಡರಾಗಬಹುದು, ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಬಹುದು ಎಂದು ಕಿವಿಮಾತು ಹೇಳಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಭಾರತ ಸೇವಾದಳದ ತಾಲ್ಲೂಕು ಸಂಘಟಕ ಎಸ್.ಈ.ಲೋಕೇಶ್ವರಾಚಾರ್ ಪ್ರತಿವರ್ಷ ವಿಶ್ವಯೋಗ ದಿನಾಚಾರಣೆಯನ್ನು ಯೋಗಸಪ್ತಾಹವನ್ನಾಗಿ 7 ದಿನಗಳ ಕಾಲ ಆಚರಿಸಲಾಗುತ್ತಿತ್ತು ಆದರೆ ಈ ಬಾರಿ ಲಾಕ್‍ಡೌನ್‍ನಿಂದಾಗಿ ಸರಳವಾಗಿ ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಭಾರತ ಸೇವಾದಳದ ಜಿಲ್ಲಾ ಕಾರ್ಯದರ್ಶಿ ಹಂಪಯ್ಯ, ಜಿಲ್ಲಾ ಸಂಘಟಕ ಚಂದ್ರಕಾಂತ್, ನಿವೃತ್ತ ಖಜಾನಾಧಿಕಾರಿ ಈಶ್ವರಯ್ಯ, ಯೋಗ ಶಿಕ್ಷಕರಾದ ರಮೇಶ್, ತಿಪ್ಪೇರುದ್ರಪ್ಪ ಹಾಜರಿದ್ದರು.