ಚಿಕ್ಕಮಗಳೂರು : ಶಾರದಾ ದೇವಿಯವರ 170ನೇ ಜನ್ಮ ದಿನಾಚರಣೆ…

118

ಚಿಕ್ಕಮಗಳೂರು : ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಪತ್ನಿ ಶ್ರೀಮಾತೆ ಶ್ರೀ ಶಾರದಾ ದೇವಿಯವರ 170ನೇ ಜನ್ಮ ದಿನಾಚರಣೆ ಇಲ್ಲಿನ ಆದಿಶಕ್ತಿನಗರದ ಶಾರದಾ ಮಠದಲ್ಲಿ ಇಂದು ಶ್ರದ್ಧಾ ಭಕ್ತಿಯಿಂದ ನಡೆಯಿತು.

ಜನ್ಮದಿನದ ಪ್ರಯುಕ್ತ ಬೆಳಿಗ್ಗೆ ಶ್ರೀಮಾತೆ ಶಾರದಾ ದೇವಿಯವರಿಗೆ ಆರತಿ, ಉಷಾ ಕೀರ್ತನೆ, ವೇದಘೋಷ, ವಿಶೇಷ ಪೂಜೆ, ಅಲಂಕಾರ, ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಜರುಗಿತು.

ಇದೇ ವೇಳೆ ಭಕ್ತರಿಂದ ಸಾಮೂಹಿಕ ಭಜನೆ, ಸ್ತೋತ್ರ ಪಠಣ, ಸಂಗೀತ, ನಾಮ ಸಂಕೀರ್ತನೆ ನಡೆದವು. ಶ್ರೀ ಮಠದ ಶ್ರೀ ಪ್ರವ್ರಾಜಿಕಾ ದಯಾನಿಷ್ಠ ಪ್ರಾಣಾ, ಶ್ರೀ ಅಜಿತಪ್ರಾಣಾ ಮತ್ತು ಶ್ರೀ ಗೋಪೇಶ ಪ್ರಾಣಾ ಮಾತಾಜಿಯವರಿಂದ ಶ್ರೀ ಶಾರದಾ ಮೂಲ ಮಂತ್ರ ಹೋಮ, ಶ್ರೀ ರಾಮಕೃಷ್ಣ ಮೂಲಮಂತ್ರ ಹೋಮ ನೆರವೇರಿತು.

ಹೋಮದ ಪೂರ್ಣಾಹುತಿ ಮತ್ತು ಮಹಾಮಂಗಳಾರತಿ ನಂತರ ಸಾರ್ವಜನಿಕ ಅನ್ನ ಸಂತರ್ಪಣೆ ಜರುಗಿತು. ಶ್ರೀಮಾತೆಯವರ ಜೀವನ, ಸಂದೇಶ ಮತ್ತು ಉಪದೇಶಗಳ ಕುರಿತು ಮಹಿಳಾ ಸಮಾಜ ಶಾಲೆಯ ಶಿಕ್ಷಕಿ ನಾಗರತ್ನ, ಕುವೆಂಪು ವಿದ್ಯಾನಿಕೇತನದ ಉಪಪ್ರಾಂಶುಪಾಲೆ ಶಮ್ಮಿ ಹಾಗೂ ನಿವೇದಿತಾ ಬ್ರಿಗೇಡ್‍ನ ಇಂದುಲೇಖಾ ಪ್ರವಚನ ನೀಡಿದರು.

ಧಾರ್ಮಿಕ ಸಮಾರಂಭದ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದ ಶ್ರೀ ಮಠದ ಅಧ್ಯಕ್ಷೆ ಶ್ರೀ ಪ್ರವ್ರಾಜಿಕಾ ಶುಭವ್ರತ ಪ್ರಾಣಾ ಮಾತಾಜಿ ಭಗವಾನ್ ಶ್ರೀ ರಾಮಕೃಷ್ಣ ಪರಮಹಂಸರ ಆಧ್ಯಾತ್ಮಿಕ ಸಾಧನೆಗೆ ಬೆನ್ನೆಲುಬಾಗಿ ನಿಂತವರು ಶ್ರೀಮಾತೆ ಶಾರದಾ ದೇವಿಯವರು ಎಂದರು.

ಶ್ರೀ ರಾಮಕೃಷ್ಣ ಪರಮಹಂಸರು ಮತ್ತು ಶ್ರೀಮಾತೆ ಶಾರದಾ ದೇವಿಯವರ ಬದುಕು, ತತ್ವ, ಸಸಂದೇಶ ಮತ್ತು ಆದರ್ಶಗಳು ಇಂದಿನ ಪೀಳಿಗೆಗೆ ದಾರಿದೀಪವಾಗಬೇಕು, ಅದರ ಬೆಳಕಿನಲ್ಲಿ ಸಾಗುವ ಮೂಲಕ ತಮ್ಮ ಜನ್ಮವನ್ನು ಸಾರ್ಥಕ ಪಡಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು.

ಜನ್ಮದಿನದ ಪ್ರಯುಕ್ತ ನಗರ ಮತ್ತು ಸುತ್ತಮುತ್ತಲ ಗ್ರಾಮಗಳ ನೂರಾರು ಭಕ್ತರು ಬೆಳಗಿನಿಂದ ಸಂಜೆಯವರೆಗೆ ಶ್ರೀಮಠಕ್ಕೆ ತೆರಳಿ ಶ್ರೀಮಾತೆಯ ದರ್ಶನ ಪಡೆದು ಪೂಜೆ ಸಲ್ಲಿಸಿದರು.