ಚಿಕ್ಕಮಗಳೂರು : ಹಲವು ಲೇಖಕರು ಮತ್ತು ಸಾಹಿತಿಗಳನ್ನು ಬೆಳೆಸಿದ ಸಹೃದಯಿ ಡಾ|| ಮಾಸ್ತಿ ವೆಂಕಟೇಶ ಅಯ್ಯಂಗಾರ್ : ಡಾ|| ಬೆಳವಾಡಿ ಮಂಜುನಾಥ್.

445
firstsuddi

ಚಿಕ್ಕಮಗಳೂರು : ಸಾಹಿತಿ ದೊಡ್ಡರಂಗೇಗೌಡ ಸೇರಿದಂತೆ ಹಲವು ಲೇಖಕರು ಮತ್ತು ಸಾಹಿತಿಗಳನ್ನು ಬೆಳೆಸಿದ ಸಹೃದಯಿ ಡಾ|| ಮಾಸ್ತಿ ವೆಂಕಟೇಶ ಅಯ್ಯಂಗಾರ್ ಎಂದು ಸಾಹಿತಿ ಡಾ|| ಬೆಳವಾಡಿ ಮಂಜುನಾಥ್ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಮತ್ತು ಕುಪ್ಪಳ್ಳಿಯ ಕುವೆಂಪು ಪ್ರತಿಷ್ಠಾನ ಆಲ್ದೂರಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಸೋಮವಾರ ಏರ್ಪಡಿಸಿದ್ದ ಜ್ಞಾನಪೀಠ ಪುರಸ್ಕೃತರ ಬದುಕು-ಬರಹ ಕುರಿತ ಉಪನ್ಯಾಸ ಕಾರ್ಯಕ್ರಮದಲ್ಲಿ ಡಾ|| ಮಾಸ್ತಿ ವೆಂಕಟೇಶ ಅಯ್ಯಂಗಾರ್ ಅವರ ಕುರಿತು ಮಾತನಾಡಿದರು.
ಸಹಲೇಖಕರನ್ನು ಅತ್ಯಂತ ಗೌರವದಿಂದ ಕಾಣುತ್ತಿದ್ದ ಮಾಸ್ತಿ ಅವರು ಇತರ ಲೇಖಕರ ಪುಸ್ತಕಗಳ ಪ್ರಕಟಣೆಗಾಗಿ ಬ್ಯಾಂಕ್ ಖಾತೆಯೊಂದನ್ನು ತೆರೆದು ತಮ್ಮ ಸಂಬಳದ ಹಣವನ್ನು ಅದಕ್ಕೆ ಜಮಾ ಮಾಡುತ್ತಿದ್ದರು ಎಂದರು.
ಬಾಲಕ ದೊಡ್ಡರಂಗೇಗೌಡ ಅವರು ತಮ್ಮ ಕವನ ಸಂಕಲವನ್ನು ಮಾಸ್ತಿ ಅವರಿಗೆ ನೀಡಿ ಅದಕ್ಕೆ ಮುನ್ನುಡಿ ಬರೆದು ಕೊಡುವಂತೆ ಮನವಿ ಮಾಡಿದ್ದರು ಆ ವೇಳೆ ಅಲ್ಲಿದ್ದ ಇನ್ನೋರ್ವ ಸಾಹಿತಿ ಕವನ ಸಂಕಲನದಲ್ಲಿ ಪ್ರಬುದ್ದತೆಯಿಲ್ಲ ಹಾಗಾಗಿ ನಿಮ್ಮಂತ ಹಿರಿಯರು ಮುನ್ನುಡಿ ಬರೆಯುವ ಅವಶ್ಯಕತೆ ಇಲ್ಲ ಎಂದಾಗ ಬಾಲಕ ಇದೀಗ ಬೆಳೆಯುವ ಸಸಿ ಅದಕ್ಕೆ ನಮ್ಮಂತವರು ನೀರೆರೆದು ಪೋಷಿಸಿದರೆ ಮಾತ್ರ ಅದು ಹೆಮ್ಮರವಾಗಿ ಕನ್ನಡದ ಆಸ್ತಿಯಾಗುತ್ತದೆ ಎಂದು ತಿಳಿಸಿದ ಮಾಸ್ತಿಯವರು ಮುನ್ನುಡಿಯನ್ನು ಬರೆದು ಕೊಟ್ಟಿದ್ದರು ಎಂದು ತಿಳಿಸಿದರು.
ಜೆ.ಪಿ.ರಾಜರತ್ನಂ ಅವರ ಕೃತಿಗಳನ್ನು ಮಾಸ್ತಿಯವರು ಸ್ವತಃ ಪ್ರಕಟಿಸುವುದರ ಜೊತೆಗೆ ಅವರಿಗೆ ಆರ್ಥಿಕ ಸಹಾಯವನ್ನೂ ಮಾಡಿದ್ದರು, ರಾಷ್ಟ್ರಕವಿ ಕುವೆಂಪು ಅವರ ಕೊಳಲು ಕವನ ಸಂಕಲನ, ಕೈಲಾಸಂ ಅವರ ಹುತ್ತದಲ್ಲಿ ಹುತ್ತ ನಾಟಕ, ಪಂಜೆ ಮಂಜೇಶರಾಯರ ಕಥೆಗಳನ್ನು ಪ್ರಕಟಿಸಿದವರು ಮಾಸ್ತಿ ಎಂದ ಮಂಜುನಾಥ್ ಜ್ಞಾನಪೀಠ ಪ್ರಶಸ್ತಿಯೊಂದಿಗೆ ಬಂದ ಮೊತ್ತವನ್ನು ಪುದುವಟ್ಟಾಗಿರಿಸಿ ಇಂದಿಗೂ ನಾಡಿನ ಶ್ರೇಷ್ಠ ಲೇಖಕರಿಗೆ ಪ್ರಶಸ್ತಿ ಕೊಡುವ ವ್ಯವಸ್ಥೆ ಮಾಡಿದವರು ಮಾಸ್ತಿ ಅವರು ಎಂದು ಹೇಳಿದರು.
ಮನೆ ಮಾತು ತಮಿಳು ಭಾಷೆಯಾದರೂ ಕನ್ನಡದ ಆಸ್ತಿಯಾದದ್ದು ಮಾಸ್ತಿ ಅವರ ಹಿರಿಮೆ, ದೈನಂದಿನ ಘಟನೆಗಳನ್ನು ಸೂಕ್ಷ್ಮವಾಗಿ ಗ್ರಹಿಸಿ ಕಥನವಾಗಿಸುವ ಕೌಶಲ್ಯ ಮಾಸ್ತಿ ಅವರಿಗೆ ಸಿದ್ದಿಸಿತ್ತು, ಕನ್ನಡದ ಸಣ್ಣ ಕಥೆಗಳಿಗೆ ಸ್ಪಷ್ಟ ರೂಪವನ್ನು ಕೊಟ್ಟ ಅವರು ಆಂಗ್ಲ ಸಂಸ್ಕೃತಿ ಮತ್ತು ಭಾರತೀಯ ಭಾಷೆಗಳಿಂದ ಪ್ರಭಾವಿತರಾದರೂ ಕನ್ನಡದ ತಾಜಾತನವನ್ನು ಕಥನವಾಗಿ ಉಳಿಸಿಕೊಂಡ ಅಪ್ಪಟ ಕನ್ನಡ ಪ್ರೇಮಿ, ಕನ್ನಡ ಸಾಹಿತ್ಯದ ವೈವಿಧ್ಯತೆ ಹಾಗೂ ಸಮೃದ್ದಿಯನ್ನು ಹೆಚ್ಚಿಸಿದ ಮಹಾನ್ ಸಾಹಿತಿ ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಕಸಾಪ ಅಧ್ಯಕ್ಷ ಕುಂದೂರು ಅಶೋಕ್ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಅಭಿರುಚಿಯನ್ನು ಮತ್ತು ಸಾಮಾನ್ಯ ಜ್ಞಾನವನ್ನು ಬೆಳೆಸುವ ಉದ್ದೇಶದಿಂದ ಇಡೀ ತಿಂಗಳು ಜಿಲ್ಲೆಯ ವಿವಿಧ ಶಾಲಾ ಕಾಲೇಜುಗಳಲ್ಲಿ ಜ್ಞಾನಪೀಠ ಪುರಸ್ಕೃತರ ಬದುಕು-ಬರಹಗಳ ಬಗ್ಗೆ ಸರಣಿ ಕಾರ್ಯಕ್ರಮಗಳನ್ನು ನಡೆಸಲಾಗುತ್ತಿದೆ ಎಂದು ತಿಳಿಸಿದರು.
ಶಾಲಾಭಿವೃದ್ದಿ ಸಮಿತಿಯ ಕಾರ್ಯಾಧ್ಯಕ್ಷ ಪ್ರಸನ್ನ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಮಾಸ್ತಿ ವೆಂಕಟೇಶ ಅಯ್ಯಂಗಾರ್ ವಿರಚಿತ ಗೀತೆಗಳ ಗಾಯನವನ್ನು ಗಾಯಕ ಕೆ.ಹೆಚ್.ಬಸವರಾಜಪ್ಪ ಮಾಡಿದರು.
ಮಾಸ್ತಿ ಅವರ ಕುರಿತು ರಸಪ್ರಶ್ನೆ ಕಾರ್ಯಕ್ರಮ ಜರುಗಿತು, ಮುಖ್ಯ ಶಿಕ್ಷಕ ಹನುಮಂತಪ್ಪ, ಕಸಾಪ ಆಲ್ದೂರು ಹೋಬಳಿ ಕಾರ್ಯದರ್ಶಿ ಕೃಷ್ಣಪ್ಪ ಪೂಜಾರ್, ಸಾಹಿತಿ ಮಂಜುಳಾ ಮಂಜುನಾಥ್ ಉಪಸ್ಥಿತರಿದ್ದರು.
ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಡಿ.ಎಂ.ಮಂಜುನಾಥ ಸ್ವಾಮಿ ಕಾರ್ಯಕ್ರಮವನ್ನು ನಿರೂಪಿಸಿದರು, ಆಲ್ದೂರು ಹೋಬಳಿ ಅಧ್ಯಕ್ಷ ಹೆಚ್.ಎಲ್.ರವಿಕುಮಾರ್ ಸ್ವಾಗತಿಸಿದರು, ತಾಲ್ಲೂಕು ಕಾರ್ಯದರ್ಶಿ ಸುರೇಶ್ ವಂದಿಸಿದರು.