ಚಿಕ್ಕಮಗಳೂರು : ಹೂವಾಡಿಗ ಸಮುದಾಯವನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರಿಸಿ : ಸಿ.ಆರ್.ರಘು ಒತ್ತಾಯ…

85
firstsuddi

ಚಿಕ್ಕಮಗಳೂರು : ರಾಜ್ಯದಲ್ಲಿ ಅತೀ ಕಡಿಮೆ ಸಂಖ್ಯೆಯಲ್ಲಿರುವ ಹೂವಾಡಿಗ ಸಮುದಾಯವನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರಿಸಬೇಕು ಎಂದು ಹೂವಾಡಿಗ ಸಂಘದ ರಾಜ್ಯಾಧ್ಯಕ್ಷ ಸಿ.ಆರ್.ರಘು ಒತ್ತಾಯಿಸಿದರು.

ನಗರದ ರಾಮನಹಳ್ಳಿಯ ಶ್ರೀ ಕೆಂಚರಾಯಸ್ವಾಮಿ ದೇವಾಲಯದಲ್ಲಿ ಜಿಲ್ಲಾ ಹೂವಾಡಿಗ ಸಂಘ ಇಂದು ಏರ್ಪಡಿಸಿದ್ದ ಹೂವಾಡಿಗ ಶರಣ ಮಾದಣ್ಣನವರ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಹೂವಾಡಿಗ ಸಮುದಾಯದ ಜನ ರಾಜ್ಯದಲ್ಲಿ ಒಂದು ಲಕ್ಷಕ್ಕೂ ಕಡಿಮೆ ಸಂಖ್ಯೆಯಲ್ಲಿದ್ದಾರೆ. ಅವರನ್ನು ಹಿಂದುಳಿದ ವರ್ಗಗಳ ಪಟ್ಟಿಗೆ ಸೇರಿಸಲಾಗಿದೆ. ಆದರೆ ಅದರಿಂದ ಆ ಸಮುದಾಯಕ್ಕೆ ಯಾವುದೇ ಸಲವತ್ತು ದೊರೆಯುತ್ತಿಲ್ಲ ಎಂದು ವಿಷಾಧಿಸಿದ ಅವರು ಈ ಹಿನ್ನೆಲೆಯಲ್ಲಿ ಹೂವಾಡಿಗರನ್ನು ಪರಿಶಿಷ್ಟ ವರ್ಗದ ಪಟ್ಟಿಗೆ ಸೇರಿಸಬೇಕು ಎಂದು ಆಗ್ರಹಿಸಿದರು.

ರಾಜ್ಯದ ವಿವಿದೆಡೆ ಹೂವಾಡಿಗರಿಗೆ ಹೂ ಮಾರಲು ಸೂಕ್ತ ಸ್ಥಳವಿಲ್ಲದಿರುವುದರಿಂದ ನೂರಾರು ವರ್ಷಗಳಿಂದ ಬೀದಿಬದಿಯಲ್ಲೇ ವ್ಯಾಪಾರ ಮಾಡುತ್ತಿದ್ದಾರೆ. ಹಾಗಾಗಿ ಅವರಿಗೆ ವ್ಯಾಪಾರ ಮಾಡಲು ಸ್ಥಳಾವಕಾಶ ಒದಗಿಸಬೇಕು. ಮೂಲಭೂತ ಸೌಲಭ್ಯಗಳನ್ನು ನೀಡಬೇಕು ಎಂದರು.

ಕೊರೊನಾ ಹಿನ್ನೆಲೆಯಲ್ಲಿ ಲಾಕ್‍ಡೌನ್‍ನಿಂದಾಗಿ ವ್ಯಾಪಾರ ವಹಿವಾಟು ಇಲ್ಲದೇ ಕಳೆದು ಎರಡು ವರ್ಷಗಳಿಂದ ಹೂವಾಡಿಗರು ಆರ್ಥಿಕವಾಗಿ ಸಂಕಷ್ಟದಲ್ಲಿರುವುದಲ್ಲಿದ್ದು ಅವರಿಗೆ ರಾಜ್ಯ ಸರ್ಕಾರ ವಿಶೇಷ ಆರ್ಥಿಕ ಪ್ಯಾಕೇಜ್ ನೀಡಬೇಕು ಎಂದು ಒತ್ತಾಯಿಸಿದರು.

ಜಿಲ್ಲಾ ಹೂವಾಡಿಗ ಸಂಘದ ಅಧ್ಯಕ್ಷ ಆನಂದ್ ಮಾತನಾಡಿ ಕೊರೊನಾ ಹಿನ್ನಲೆಯಲ್ಲಿ ಜಯಂತಿ ಕಾರ್ಯಕ್ರಮವನ್ನು ಸರಳವಾಗಿ ಆಚರಿಸಲಾಗುತ್ತಿದ್ದು ಮುಂದಿನ ವರ್ಷ ಅದ್ದೂರಿಯಾಗಿ ನಡೆಸಲಾಗುವುದು ಎಂದು ತಿಳಿಸಿದರು.

ಜಯಂತಿ ಪ್ರಯುಕ್ತ ಹೂವಾಡಿಗ ಶರಣ ಮಾದಣ್ಣನವರ ಭಾವಚಿತ್ರಕ್ಕೆ ಸಾಮೂಹಿಕವಾಗಿ ಪುಷ್ಪ ನಮನ ಸಲ್ಲಿಸಲಾಯಿತು. ಹೂವಾಡಿಗ ಸಂಘದ ರಾಜ್ಯ ಖಜಾಂಚಿ ಸಿ.ವಿ.ಮಂಜುನಾಥ್, ನಿರ್ದೇಶಕ ಚೆಲುವಯ್ಯ, ಜಿಲ್ಲಾ ಗೌರವಾಧ್ಯಕ್ಷ ರಾಜುಗೌಡ, ಪ್ರಧಾನ ಕಾರ್ಯದರ್ಶಿ ಶಂಭುಲಿಂಗಪ್ಪ, ಖಜಾಂಚಿ ಕುಮಾರ್, ಆರ್.ಟಿ.ಲೋಕೇಶ್, ಜಿಲ್ಲಾ ಉಪಾಧ್ಯಕ್ಷ ಹರಿನಾಥ್, ಆರ್.ಎಸ್.ಸುರೇಶ್, ಹಾಲಪ್ಪ ಉಪಸ್ಥಿತರಿದ್ದರು.