ವಿನಯ್ ಕುಲಕರ್ಣಿಗೆ ಬಿಗ್ ಶಾಕ್ ; ಧಾರವಾಡ ಪ್ರವೇಶಕ್ಕೆ ಅನುಮತಿ ನಿರಾಕರಿಸಿದ ಕೋರ್ಟ್…

48
firstsuddi

ಬೆಂಗಳೂರು : ಮಾಜಿ ಸಚಿವ, ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿಗೆ ಧಾರವಾಡ ಜಿಲ್ಲಾ ಪ್ರವೇಶಕ್ಕೆ ಅನುಮತಿ ನೀಡಲು ಕೋರ್ಟ್ ನಿರಾಕರಿಸಿದೆ. ಇದರಿಂದ ಚುನಾವಣೆ ಹೊತ್ತಲ್ಲೇ ವಿನಯ್ ಕುಲಕರ್ಣಿಗೆ ಸಂಕಷ್ಟ ಎದುರಾಗಿದೆ.

ಬಿಜೆಪಿ ಮುಖಂಡ ಯೋಗೀಶ್ ಗೌಡ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಧಾರವಾಡಕ್ಕೆ ಹೋಗಲು ಅನುಮತಿ ನೀಡುವಂತೆ ಕೋರಿ ಕಾಂಗ್ರೆಸ್ ಅಭ್ಯರ್ಥಿ ವಿನಯ್ ಕುಲಕರ್ಣಿ ಸಲ್ಲಿಸಿದ್ದ ಅರ್ಜಿಯನ್ನು ಇಂದು ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಜಾಗೊಳಿಸಿದೆ.

ಯೋಗೀಶ್ ಗೌಡ ಪ್ರಕರಣದ 120 ಸಾಕ್ಷಿಗಳ ಪೈಕಿ 90 ಮಂದಿ ಧಾರವಾಡದವರೇ ಆಗಿದ್ದಾರೆ. ವಿನಯ್ ಕುಲಕರ್ಣಿಗೆ ಕ್ಷೇತ್ರಕ್ಕೆ ಪ್ರವೇಶ ನೀಡಿದರೆ ಆದೇಶ ದುರುಪಯೋಗವಾಗಬಹುದು. ಮುಂದೆ ವಿಚಾರಣೆಗೆ ಸಮಸ್ಯೆಯಾಗಬಹುದು. ಸಾಕ್ಷಿಗಳಿಗೆ ಬೆದರಿಕೆ ಹಾಕುವ ಸಾಧ್ಯತೆಯಿದೆ. ಯಾವುದೇ ಕಾರಣಕ್ಕೂ ಪ್ರವೇಶಕ್ಕೆ ಅನುಮತಿ ನೀಡಬಾರದು ಎಂದು ಸಿಬಿಐ ಪರ ವಕೀಲರು ವಾದ ಮಂಡಿಸಿದ್ದರು. ಇದನ್ನು ಆಲಿಸಿದ ನ್ಯಾಯಮೂರ್ತಿ ಬಿ. ಜಯಂತ ಕುಮಾರ್, ವಿನಯ್ ಕುಲಕರ್ಣಿ ಮನವಿಯನ್ನು ತಿರಸ್ಕರಿಸಿ ಆದೇಶ ಹೊರಡಿಸಿದರು.

ಯೋಗೀಶ್ ಗೌಡ ಕೊಲೆ ಪ್ರಕರಣದ ಆರೋಪಿಯಾಗಿರುವ ವಿನಯ್ ಕುಲಕರ್ಣಿಯನ್ನು ಸಿಬಿಐ ಬಂಧಿಸಿತ್ತು. ಜಾಮೀನು ಮಂಜೂರು ಮಾಡುವಾಗ ಧಾರವಾಡ ಪ್ರವೇಶಿಸದಂತೆ ಸುಪ್ರೀಂ ಕೋರ್ಟ್ ಷರತ್ತು ವಿಧಿಸಿತ್ತು. ಆದರೆ ಅನಿವಾರ್ಯ ಇದ್ದಾಗ ಮಾತ್ರ ಧಾರವಾಡ ಪ್ರವೇಶಕ್ಕೆ ಅನುಮತಿ ನೀಡಿತ್ತು. ಈ ಬಾರಿಯ ಚುನಾವಣೆಯಲ್ಲಿ ಸ್ಪರ್ಧೆ ಮಾಡುತ್ತಿದ್ದ ಕಾರಣ ವಿನಯ್ ಕುಲಕರ್ಣಿ ಅರ್ಜಿ ಸಲ್ಲಿಸಿ ಪ್ರವೇಶಕ್ಕೆ ಮನವಿ ಮಾಡಿದ್ದರು. ಏಪ್ರಿಲ್ 15 ರಂದು ವಿನಯ್ ಕುಲಕರ್ಣಿ ಅವರ ಅರ್ಜಿಯ ವಿಚಾರಣೆಯನ್ನು ಪೂರ್ಣ ಮಾಡಿದ್ದ ಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು.