ಚೈತ್ರಾ ಪ್ರಕರಣಕ್ಕೂ ನಮಗೂ ಯಾವುದೇ ಸಂಬಂಧವಿಲ್ಲ, ಅವರು ನಮ್ಮ ಸಂಘಟನೆಯವರಲ್ಲ: ಶರಣ್ ಪಂಪ್‌ವೆಲ್‌.

64
firstsuddi

ಮಂಗಳೂರು: ರಾಜ್ಯದಲ್ಲಿ ಉಡುಪಿ ಉದ್ಯಮಿ ಗೋವಿಂದಬಾಬು ಪೂಜಾರಿಗೆ ಬಿಜೆಪಿ ಟಿಕೆಟ್ ಕೊಡಿಸುವುದಾಗಿ 5 ಕೋಟಿ ರೂ. ಹಣವನ್ನು ಪಡೆದು ವಂಚನೆ ಮಾಡಿದ ಆರೋಪಿ ಹಿಂದೂ ಕಾರ್ಯಕರ್ತೆ ಚೈತ್ರಾ ಕುಂದಾಪುರ, ವಿಶ್ವ ಹಿಂದೂ ಪರಿಷತ್‌ನಲ್ಲಿ ಇರಲಿಲ್ಲ ಎಂದು ಸಂಘಟನೆ ಪ್ರಾಂತ ಕಾರ್ಯದರ್ಶಿ ಶರಣ್ ಪಂಪ್‌ವೆಲ್‌ ಹೇಳಿದ್ದಾರೆ.

ಮಂಗಳೂರಿನಲ್ಲಿ ಈ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ವಿಶ್ವ ಹಿಂದೂ ಪರಿಷತ್‌ನ ಪ್ರಾಂತ ಸಹಕಾರ್ಯದರ್ಶಿ ಶರಣ್ ಪಂಪ್ ವೆಲ್ ಅವರು, ಚೈತ್ರಾ ಕುಂದಾಪುರ ನಮ್ಮ ಸಂಘಟನೆಯಲ್ಲಿ ಇರಲಿಲ್ಲ. ಅವಳನ್ನ ನಮ್ಮ ಕಾರ್ಯಕ್ರಮದ ಭಾಷಣಕಾರಳಾಗಿ ಕರೆದಿದ್ದೆವು ಅಷ್ಟೇ. ಚೆನ್ನಾಗಿ ಭಾಷಣ ಮಾಡ್ತಿದ್ದ ಕಾರಣಕ್ಕೆ ನಾವು ಕರೀತಾ ಇದ್ದೆವು. ಹಿಂದುತ್ವ ಮತ್ತು ಅದರ ವಿಚಾರದಲ್ಲಿ ಮಾತನಾಡ್ತಾ ಇದ್ದಳು. ಸದ್ಯ ವಂಚನೆ ಪ್ರಕರಣದಲ್ಲಿ ಬಂಧನ ಆಗಿದೆ. ತಪ್ಪು ಮಾಡಿದ್ದರೆ ಕ್ರಮ ಆಗಲಿ. ನಮ್ಮ ಸಂಘಟನೆ ಇಂಥವುಗಳಿಗೆ ಯಾವುದೇ ಕಾರಣಕ್ಕೆ ಬೆಂಬಲಿಸಲ್ಲ ಎಂದು ಹೇಳಿದರು.

ಚೈತ್ರಾ ಕುಂದಾಪುರಳ ಬಗ್ಗೆ ಒಂದು ತಿಂಗಳ ಹಿಂದೆ ಗುರುಪುರ ವಜ್ರದೇಹಿ ಶ್ರೀಗಳೇ ನನ್ನ ಗಮನಕ್ಕೆ ತಂದಿದ್ದರು. ಆಗಲೂ ನಾನು ತನಿಖೆ ಆಗಲಿ, ತಪ್ಪು ಮಾಡಿದವರಿಗೆ ಶಿಕ್ಷೆಯಾಗಲಿ ಎಂದು ಹೇಳಿದ್ದೆನು. ಹೀಗಾಗಿ ತಪ್ಪು ಮಾಡಿದ ಯಾರೇ ಆದರೂ ಶಿಕ್ಷೆಯಾಗಲಿ. ಈ ವಿಚಾರದಲ್ಲಿ ವಿಶ್ವ ಹಿಂದೂ ಪರಿಷತ್‌ನಿಂದ ಯಾರನ್ನೂ ಬೆಂಬಲ ಮಾಡಲ್ಲ. ಮುಂದಿನ ದಿನಗಳಲ್ಲಿಯೂ ಇಂಥವರಿಗೆ ನಮ್ಮ ಸಂಘಟನೆಯಲ್ಲಿ ಅವಕಾಶವನ್ನೂ ನೀಡುವುದಿಲ್ಲ ಎಂದು ಶರಣ್ ಪಂಪ್‌ವೆಲ್ ತಿಳಿಸಿದರು.