ಬೆಳಗಾವಿ : ಜಿ.ಪಂ ಸದಸ್ಯ ಯೋಗೇಶಗೌಡ ಕೊಲೆ ಪ್ರಕರಣದಲ್ಲಿ 2020ರ ನವೆಂಬರ್ 5ರಂದು ಹಿಂಡಲಗಾ ಜೈಲು ಸೇರಿದ್ದ ಮಾಜಿ ಸಚಿವ ವಿನಯ್ ಕುಲಕರ್ಣಿಯವರಿಗೆ ನಿನ್ನೆಯಷ್ಟೇ ಜಾಮೀನು ನೀಡಲಾಗಿದೆ. ಆದರೆ ಜಾಮೀನು ಮಂಜೂರಾದರೂ ವಿನಯ್ ಕುಲಕರ್ಣಿ ಅವರನ್ನು ಇಂದು ಬಿಡುಗಡೆ ಮಾಡುವುದು ಅನುಮಾನ ಎಂದು ಹೇಳಲಾಗುತ್ತಿದೆ.
ಜನಪ್ರತಿನಿಧಿಗಳ ನ್ಯಾಯಾಲಯ ನಿನ್ನೆ ಜಾಮೀನು ಮಂಜೂರು ಮಾಡಿತ್ತು. ಆದರೆ ಆದೇಶ ಪ್ರತಿಯನ್ನು ಹಿಂಡಲಗಾ ಜೈಲಿಗೆ ಸ್ಪೀಡ್ ಪೋಸ್ಟ್ ಮಾಡಿದೆ. ಇಂದು ವರಮಹಾಲಕ್ಷ್ಮೀ ಹಬ್ಬದ ಹಿನ್ನೆಲೆ ಸರ್ಕಾರಿ ಕಚೇರಿಗಳಿಗೆ ರಜೆ ಇರುವುದರಿಂದ ನ್ಯಾಯಾಲಯದ ಆದೇಶ ಪ್ರತಿ ನಾಳೆ ಜೈಲು ಸಿಬ್ಬಂದಿ ಕೈಸೇರುವ ಸಾಧ್ಯತೆ ಇದೆ. ಹೀಗಾಗಿ ಜಾಮೀನು ಸಿಕ್ಕರೂ ಅವರು ಜೈಲಲ್ಲೇ ಇರಬೇಕಿದೆ. ವಿನಯ್ ಕುಲಕರ್ಣಿಯವರನ್ನು ನಾಳೆ ಬಿಡುಗಡೆ ಮಾಡುವ ಸಾಧ್ಯತೆ ಇದೆ ಎಂಬ ಮಾಹಿತಿ ದೊರೆತಿದೆ.










