ಕೊಪ್ಪ: ಜಿಲ್ಲಾ ಪಂಚಾಯಿತಿ, ತಾಲೂಕು ಪಂಚಾಯಿತಿ ಎಲೆಕ್ಷನ್ ನಡೆದರೆ ಏನಾಗುತ್ತೋ ಅಂತ ಭಯ. ಸರ್ಕಾರಕ್ಕೆ ಗೆಲ್ಲುವ ಆತ್ಮವಿಶ್ವಾಸವೇ ಇಲ್ಲ ಅದಕ್ಕೆ ಸರ್ಕಾರ ಎಲೆಕ್ಷನ್ ಮುಂದೆ ಹಾಕಿಕೊಂಡು ಹೋಗುತ್ತಿದೆ ಎಂದು ರಾಜ್ಯ ಜೆಡಿಎಸ್ ಯುವ ಘಟಕದ ಅಧ್ಯಕ್ಷ ನಿಖಿಲ್ ಕುಮಾರಸ್ವಾಮಿ ಸರ್ಕಾರದ ವಿರುದ್ಧ ಅಸಮಾಧಾನ ಹೊರಹಾಕಿದ್ದಾರೆ. ಶೃಂಗೇರಿ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಕೊಪ್ಪ ತಾಲೂಕಿನಲ್ಲಿ ಮಾತನಾಡಿದ ಅವರು, ನ್ಯಾಯಾಲಯ ಜಿಪಂ-ತಾಪಂ ಚುನಾವಣೆ ಮಾಡಿ ಅಂತ ಕೋರ್ಟ್ ಸೂಚನೆ ನೀಡಿದೆ. ಆದರೆ, ಎಲೆಕ್ಷನ್ ಮಾಡಿದ್ರೆ ಏನಾಗುತ್ತೋ ಅಂತ ಸರ್ಕಾರಕ್ಕೆ ಆತ್ಮವಿಶ್ವಾಸವೇ ಇಲ್ಲ ಎಂದು ವ್ಯಂಗ್ಯವಾಡಿದ್ದಾರೆ. ಸರ್ಕಾರದ ಸಚಿವರು ಹಾಗೂ ಶಾಸಕರು ಮಾನಸಿಕವಾಗಿ ಸಿದ್ಧರಾಗಿದ್ದಾರೆ. 3 ವರ್ಷ ಎಷ್ಟು ಆಗುತ್ತೋ ಅಷ್ಟು ದುಡ್ಡು ಮಾಡಿಕೊಳ್ಳೋಕೆ ಸಿದ್ಧರಾಗಿದ್ದಾರೆ. ಮುಂದೆ ಅದೇ ದುಡ್ಡಲ್ಲಿ ಮತ್ತೆ ಎಲೆಕ್ಷನ್ ಮಾಡೋಕೆ ಮಾನಸಿಕವಾಗಿ ಸಿದ್ಧರಾಗಿದ್ದಾರೆ ಎಂದರು. ಮೊನ್ನೆ ಮೈಸೂರಿನಲ್ಲಿ ಅದೆಂತದ್ದೋ ಸಾಧನಾ ಸಮಾವೇಶ ಅಂತ ಮಾಡಿದ್ದಾರೆ. ಆದರೆ,
ರಾಜ್ಯದಲ್ಲಿ ಏನು ಸಾಧನೆ-ಅಭಿವೃದ್ಧಿ ಆಗಿದೆ ಅಂತ ಕಾಂಗ್ರೆಸ್ಸಿಗರೇ ಉತ್ತರ ಕೊಡಬೇಕಿದೆ. ಮುಖ್ಯಮಂತ್ರಿಗಳುಕುರ್ಚಿ ಬಗ್ಗೆ ಯಾವುದೇ ಒಳ ಒಪ್ಪಂದ ಇಲ್ಲ. 5 ವರ್ಷ ನಾನೇ ಸಿಎಂ ಅಂತಾರೆ. ಸರ್ಕಾರಕ್ಕೆ ರಾಜ್ಯದ ಅಭಿವೃದ್ಧಿ, ಜನರ ಕಷ್ಟಕ್ಕಿಂತ ಇವರಿಗೆ ಸಿಎಂ ಕುರ್ಚಿ ಕಿತ್ತಾಟವೇ ಮುಖ್ಯವಾಗಿದೆ ಎಂದ ಅವರು,ಸಿಎಂ ಕುರ್ಚಿ ಉಳಿಸಿಕೊಳ್ಳಬೇಕು, ಡಿಸಿಎಂಗೆ ಸಿಎಂ ಕುರ್ಚಿ ಬೇಕು, ಮತ್ತೊಬ್ಬರಿಗೆ ಅಧ್ಯಕ್ಷರ ಕುರ್ಚಿ ಮೇಲೆ ಕಣ್ಣು, ಈ ಕುರ್ಚಿ ಕಿತ್ತಾಟದಲ್ಲಿ ರಾಜ್ಯದ ಜನ ಬೇಸತ್ತು ಹೋಗಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ. ಸರ್ಕಾರದ 2 ವರ್ಷಗಳ ಆಡಳಿತದ ವೈಖರಿ ನೋಡಿ ಜನರೇ ಸರ್ಕಾರದ ನಡೆ ಬಗ್ಗೆ ಚರ್ಚೆ ಮಾಡಲು ಶುರು ಮಾಡಿದ್ದಾರೆ ಎಂದು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.










