ಜೂ.20 ರಂದು ರಾಜ್ಯಕ್ಕೆ ಮೋದಿ ಆಗಮನ : ಸಿದ್ಧತಾ ಕಾರ್ಯಗಳ ಕುರಿತು ಸಿಎಂ ಪರಿಶೀಲನೆ…

64
firstsuddi

ಬೆಂಗಳೂರು : ಜೂನ್ 20, 21ರಂದು ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ರಾಜ್ಯಕ್ಕೆ ಭೇಟಿ ನೀಡುತ್ತಿದ್ದು, ಅವರ ಕಾರ್ಯಕ್ರಮ ಯಶಸ್ವಿಗೊಳಿಸಲು ಸಕಲ ಸಿದ್ಧತೆ ಕೈಗೊಳ್ಳಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ತಿಳಿಸಿದ್ದಾರೆ.

ಪ್ರಧಾನಿ ಮೋದಿ ಆಗಮನ ಹಿನ್ನೆಲೆಯಲ್ಲಿ ಅವರು ಬೆಂಗಳೂರಿನಲ್ಲಿ ಭೇಟಿ ನೀಡಲಿರುವ ಕೇಂದ್ರಗಳಿಗೆ ಹೋಗಿ ಸಿದ್ಧತಾ ಕಾರ್ಯಗಳ ಕುರಿತು ಪರಿಶೀಲನೆ ನಡೆಸಿದ ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಿಎಂ, ಜೂನ್ 20 ರಂದು ಪ್ರಧಾನಮಂತ್ರಿ ನರೇಂದ್ರ ಮೋದಿಯವರು ಬೆಂಗಳೂರು ಮತ್ತು ಮೈಸೂರಿಗೆ ಭೇಟಿ ನೀಡಲಿದ್ದಾರೆ. ಈಗಾಗಲೇ ಅವರ ಕಾರ್ಯಕ್ರಮ ಪಟ್ಟಿ ಬಂದಿದೆ. ಕಾರ್ಯಕ್ರಮ ಅಚ್ಚುಕಟ್ಟಾಗಿ ಜರುಗಬೇಕೆಂಬ ಉದ್ದೇಶದಿಂದ ನಮ್ಮೆಲ್ಲಾ ಸಚಿವ ಸಂಪುಟದ ಸಹೋದ್ಯೋಗಿಗಳು, ಎಲ್ಲಾ ಶಾಸಕರು ಶ್ರಮವಹಿಸುತ್ತಿದ್ದಾರೆ. ಅಧಿಕಾರಿಗಳಿಗೆ ಸಂಪೂರ್ಣ ಸಹಕಾರ ನೀಡಿ ಕೈ ಜೋಡಿಸಿದ್ದಾರೆ. ಎಸ್ ಪಿಜಿ ಮಾರ್ಗದರ್ಶನದಲ್ಲಿ ಭದ್ರತಾ ಕಾರ್ಯಗಳನ್ನು ಕೈಗೊಳ್ಳಲಾಗಿದೆ ಎಂದು ಹೇಳಿದ್ದಾರೆ.

ಪ್ರಧಾನಿ ಮೋದಿ ಅವರು ಬೆಳಗ್ಗೆ 11.55 ಕ್ಕೆ ಬೆಂಗಳೂರಿನ ಯಲಹಂಕ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಅಲ್ಲಿಂದ ಹೆಲಿಕಾಪ್ಟರ್ ಮೂಲಕ ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಸೈನ್ಸ್ (ಭಾರತೀಯ ವಿಜ್ಞಾನ ಸಂಸ್ಥೆ) ನಲ್ಲಿ ಎರಡು ಕಾರ್ಯಕ್ರಮಗಳಲ್ಲಿ ಭಾಗವಹಿಸಲಿದ್ದಾರೆ. ಐಐಎಸ್ ಸಿಯಲ್ಲಿ ಬ್ರೈನ್ ಸೆಲ್ಸ್ ಡೆವಲಪ್ ಮೆಂಟ್ ಕೇಂದ್ರದ ಉದ್ಘಾಟನೆ, ಮೈಂಡ್ ಟ್ರೀ ಸಂಸ್ಥೆಯ ಸಂಶೋಧನಾ ಆಸ್ಪತ್ರೆಯ ಆಸ್ಪತ್ರೆ ನಿರ್ಮಾಣಕ್ಕೆ ಅಡಿಗಲ್ಲು ಹಾಕಲಿದ್ದಾರೆ. ನಂತರ 15,000 ಕೋಟಿ ರೂ.ಗಳ ವೆಚ್ಚದ ಸಬ್ ಅರ್ಬನ್ ರೈಲ್ವೆ ಯೋಜನೆಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ. ಇದರ ಜೊತೆಗೆ 6 ರೈಲ್ವೆ ಯೋಜನೆಗಳಿಗೆ, ರಾಷ್ಟ್ರೀಯ ಹೆದ್ದಾರಿ ಯೋಜನೆಗೆ ಸಹ ಅಡಿಗಲ್ಲು ಹಾಕಲಿದ್ದಾರೆ ಎಂದರು.

ಇದಾದ ನಂತರ ಬೆಂಗಳೂರು ವಿವಿಯಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಸ್ಕೂಲ್ ಆಫ್ ಎಕನಾಮಿಕ್ಸ್ ಗೆ ಭೇಟಿ ನೀಡಿ ಮೂರ್ತಿ ಅನಾವರಣ ಹಾಗೂ ಸಂಸ್ಥೆಯ ಉದ್ಘಾಟನೆ ನೆರವೇರಿಸಲಿದ್ದಾರೆ. ಅಲ್ಲಿಂದ ಮೈಸೂರಿಗೆ ತೆರಳಲಿದ್ದಾರೆ. ಅಲ್ಲಿ ಕೇಂದ್ರ ಸರ್ಕಾರಿ ಯೋಜನೆ ಫಲಾನುಭವಿಗಳ ಸಮ್ಮೇಳನವಿದೆ. ಅದನ್ನು ಮುಗಿಸಿ ಸುತ್ತೂರು ಮಠ ಹಾಗೂ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಲಿದ್ದಾರೆ. ಮರುದಿನ ವಿಶ್ವ ಯೋಗ ದಿನಾಚರಣೆಯಲ್ಲಿ ಭಾಗವಹಿಸಿ ಹಿಂದಿರುಗಲಿದ್ದಾರೆ ಎಂದು ಸಿಎಂ ವಿವರಿಸಿದ್ದಾರೆ.