ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿಗೆ ಐಟಿ ಶಾಕ್…

72
firstsuddi

ಬೆಂಗಳೂರು : ಇಂದು ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿಗೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ಶಾಕ್ ನೀಡಿದ್ದಾರೆ. ಏಕಕಾಲದಲ್ಲಿ ಪ್ರಭಾಕರ್ ರೆಡ್ಡಿಗೆ ಸಂಬಂಧಿಸಿದ ಮೂರು ಕಡೆ ಐಟಿ ಅಧಿಕಾರಿಗಳು ದಾಳಿ ನಡೆಸಿ ಪರಿಶೀಲನೆ ನಡೆಸುತ್ತಿದ್ದಾರೆ.

ಪ್ರಭಾಕರ್ ರೆಡ್ಡಿ ಅವರ ಮೈಲಸಂದ್ರದ ಮನೆ, ಕಚೇರಿ, ಕೋಣನಕುಂಟೆಯ ಅಪಾರ್ಟ್‍ಮೆಂಟ್ ಮೇಲೆ ತೆರಿಗೆ ವಂಚನೆ ಆರೋಪದಡಿ ದಾಳಿ ನಡೆಸಿರುವ ಆದಾಯ ತೆರಿಗೆ ಅಧಿಕಾರಿಗಳು ಕಡತಗಳ ಪರಿಶೀಲನೆ ಕೈಗೊಂಡಿದ್ದಾರೆ.

ಪ್ರಭಾಕರ ರೆಡ್ಡಿ ರಿಯಲ್ ಎಸ್ಟೇಟ್ ಉದ್ಯಮಿಯಾಗಿದ್ದು, ಈ ಹಿಂದೆಯೂ ಹಲವು ಬಾರಿ ಅವರ ನಿವಾಸದ ಮೇಲೆ ಐಟಿ ದಾಳಿ ನಡೆದಿತ್ತು, ವಿಧಾನಸಭಾ ಚುನಾವಣೆ 2023 ರಲ್ಲಿ ಪ್ರಭಾಕರ್ ರೆಡ್ಡಿ ಬೆಂಗಳೂರು ದಕ್ಷಿಣದಿಂದ ಟಿಕೆಟ್ ಆಕಾಂಕ್ಷಿಯಾಗಿದ್ದಾರೆ.

ಜೆಡಿಎಸ್ ಮುಖಂಡ ಪ್ರಭಾಕರ್ ರೆಡ್ಡಿ ಮನೆ ಮೇಲೆ ಇಂದು ನಡೆದ ಐಟಿ ದಾಳಿ ವಿಚಾರ ಕುರಿತು ಹುಬ್ಬಳ್ಳಿ ತಾಲೂಕಿನ ಹೆಬಸೂರಿನಲ್ಲಿ ಪ್ರತಿಕ್ರಿಯಿಸಿದ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಅವರು, ಪ್ರಭಾಕರ್ ರೆಡ್ಡಿ ಒಬ್ಬ ಉದ್ಯಮಿ. ಇಂತಹ ಐಟಿ ದಾಳಿ ಸಾಮಾನ್ಯ. ಇನ್ನೂ ಎರಡ್ಮೂರು ತಿಂಗಳು ಇಂತಹ ಐಟಿ ದಾಳಿಗಳು ಪ್ರತಿಪಕ್ಷದ ನಾಯಕರ ಮೇಲೆ ನಡೆಯುತ್ತದೆ. ಇದು ಯಾಕೆ ಅಂತ ಎಲ್ಲರಿಗೂ ಗೊತ್ತು. ಈ ಬಗ್ಗೆ ಜಾಸ್ತಿ ಮಾತನಾಡುವ ಅವಶ್ಯಕತೆಯಿಲ್ಲ ಎಂದರು.