ಜೈನಮುನಿ ಹತ್ಯೆ ಪ್ರಕರಣ: ಖಟಕಬಾವಿ ಗದ್ದೆಯ ಕೊಳವೆಬಾವಿಯಲ್ಲಿ ಮೃತದೇಹ ಪತ್ತೆ…

61
firstsuddi

ಚಿಕ್ಕೋಡಿ: ಹೀರೆಕುಡಿ ನಂದಿ ಪರ್ವತ ಆಶ್ರಮದ ಜೈನಮುನಿ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಶೋಧಕಾರ್ಯ ಮುಗಿದಿದ್ದು, ಖಟಕಬಾವಿ ಗದ್ದೆಯ ಕೊಳವೆಬಾವಿಯಲ್ಲಿ ಸ್ವಾಮೀಜಿ ಮೃತದೇಹ ಪತ್ತೆಯಾಗಿದೆ.

ಜುಲೈ 6ರಿಂದ ನಂದಿ ಪರ್ವತ ಆಶ್ರಮದ ಜೈನಮುನಿಗಳು ನಾಪತ್ತೆಯಾಗಿದ್ದು, ಸ್ವಾಮೀಜಿಯ ನಾಪತ್ತೆಯ ಕುರಿತು ಭಕ್ತರು ಚಿಕ್ಕೋಡಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ಈ ಹಿನ್ನೆಲೆ ತನಿಖೆ ಕೈಗೊಂಡ ಪೊಲೀಸರು ಅನುಮಾನದ ಮೇಲೆ ಇಬ್ಬರು ಆರೋಪಿಗಳನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಿದ್ದರು. ವಿಚಾರಣೆ ವೇಳೆ ಹಣಕಾಸಿನ ವಿಚಾರವಾಗಿ ಸ್ವಾಮೀಜಿಯನ್ನು ಹತ್ಯೆ ಮಾಡಿರುವುದಾಗಿ ಒಪ್ಪಿಕೊಂಡ ಆರೋಪಿಗಳು, ಅವರ ಮೃತದೇಹವನ್ನು ಸುಮಾರು 400 ಅಡಿ ಉದ್ದದ ಕೊಳವೆ ಬಾವಿಯಲ್ಲಿ ಎಸೆದಿರುವುದಾಗಿ ಮಾಹಿತಿಯನ್ನು ನೀಡಿದ್ದರು.

ಆರೋಪಿಗಳು ನೀಡಿದ ಮಾಹಿತಿಯ ಮೇರೆಗೆ ಪೊಲೀಸರು ನಿನ್ನೆ ರಾತ್ರಿಯಿಂದ ಶೋಧಕಾರ್ಯ ನಡೆಸಿದ್ದರು. ಸ್ವಾಮೀಜಿ ಮೃತದೇಹ ಪತ್ತೆಯಾಗದ ಹಿನ್ನೆಲೆ ಇಂದು ಸಹ ಜೆಸಿಬಿ ಸಹಾಯದಿಂದ ಶೋಧ ಕಾರ್ಯ ಮುಂದುವರೆಸಿದ್ದು, ಕೊಳವೆ ಬಾವಿಯ 20 ಅಡಿ ಆಳದಲ್ಲಿ ಸ್ವಾಮೀಜಿ ಮೃತದೇಹ ಪತ್ತೆಯಾಗಿದೆ. ಸ್ವಾಮೀಜಿಗೆ ಕರೆಂಟ್ ಶಾಕ್ ನೀಡಿ ಹತ್ಯೆಗೈದ ಹಂತಕರು ಅವರ ಮೃತದೇಹವನ್ನು ಪೀಸ್ ಪೀಸ್ ಮಾಡಿ ಬಟ್ಟೆಯಲ್ಲಿ ಸುತ್ತಿ ಗಂಟುಕಟ್ಟಿ ಕೊಳವೆ ಬಾವಿಯಲ್ಲಿ ಎಸೆದಿದ್ದಾರೆ. ನಿರಂತರ 10 ಗಂಟೆಗಳ ಕಾರ್ಯಾಚರಣೆಯ ಬಳಿಕ ಕೊಳವೆಬಾವಿಯಲ್ಲಿ ಸ್ವಾಮೀಜಿ ಮೃತದೇಹವಿರುವ ಗಂಟು ಪತ್ತೆಯಾಗಿದ್ದು, ಎಸ್‌ಡಿಆರ್‌ಎಫ್ ಸಿಬ್ಬಂದಿ, ಎಫ್ಎಸ್ಎಲ್ ತಂಡದ ಸಹಾಯದೊಂದಿಗೆ ಪೊಲೀಸರು ಮೃತದೇಹವನ್ನು ಮೇಲಕ್ಕೆತ್ತುವಲ್ಲಿ ಯಶಸ್ವಿಯಾಗಿದ್ದಾರೆ.