ಬೆಂಗಳೂರು: ಜೈಲಿನಿಂದ ಜಾಮೀನಿನ ಮೇಲೆ ಹೊರಬಂದ ಕೆಲವೇ ಗಂಟೆಗಳಲ್ಲಿ ಬೆಂಗಳೂರಿನ ಕುಖ್ಯಾತ ರೌಡಿಶೀಟರ್ ಸಿದ್ದಾಪುರ ಮಹೇಶ್ ನನ್ನು ಹೊಸ ರೋಡ್ ಜಂಕ್ಷನ್ ಬಳಿ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿದ್ದಾರೆ.
ಈ ಪ್ರಕರಣಕ್ಕೆ ಸಂಬಂಧಿಸಿದಂತೆ ವಿರೋಧಿ ಗ್ಯಾಂಗ್ ಎಂದು ಗುರುತಿಸಿಕೊಂಡಿದ್ದ ರೌಡಿಶೀಟರ್ ವಿಲ್ಸನ್ ಗಾರ್ಡನ್ ನಾಗ, ಡಬಲ್ ಮೀಟರ್ ಮೋಹನ್, ಸುನೀಲ್ ಸೇರಿದಂತೆ ಹಲವರ ವಿರುದ್ಧ ಪರಪ್ಪನ ಅಗ್ರಹಾರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
ವಿಲ್ಸನ್ ಗಾರ್ಡನ್ ನಾಗ, ಸಿದ್ದಾಪುರ ಮಹೇಶ್ ಮಧ್ಯೆ ದ್ವೇಷವಿತ್ತು. 2020ರಲ್ಲಿ ಜಯನಗರದಲ್ಲಿ ನಡೆದಿದ್ದ ಮದನ್ ಕೊಲೆ ಕೇಸ್‌ನಲ್ಲಿ ಭಾಗಿಯಾಗಿ ಮಹೇಶ್ ಜೈಲು ಸೇರಿದ್ದರು.
ಹೊಸ ರೋಡ್ ಜಂಕ್ಷನ್ ಬಳಿ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮಹೇಶ್ ಮೇಲೆ ದಾಳಿ ಮಾಡಿದ ದುಷ್ಕರ್ಮಿಗಳು, ಮನಸೋಇಚ್ಛೆ ಕೊಚ್ಚಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.
ಸ್ಥಳಕ್ಕೆ ಭೇಟಿ ನೀಡಿದ ಪರಪ್ಪನ ಅಗ್ರಹಾರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು, ಆರೋಪಿಗಳ ಬಂಧನಕ್ಕೆ ಬಲೆ ಬೀಸಿದ್ದಾರೆ.










