ಜೊತೆಯಾಗಿ ಸ್ನಾನಕ್ಕೆ ಹೋಗಿದ್ದ ಯುವಕ-ಯುವತಿ ಬಾತ್​ರೂಮ್​ನಲ್ಲೇ ಉಸಿರುಗಟ್ಟಿ ಸಾವು…

95
firstsuddi

ಬೆಂಗಳೂರು: ಸ್ನಾನಕ್ಕೆಂದು ಒಟ್ಟಿಗೆ ಹೋಗಿದ್ದ ಯುವಕ-ಯುವತಿ ಬಾತ್​ರೂಮ್​ನಲ್ಲೇ ಉಸಿರುಗಟ್ಟಿ ಸಾವನ್ನಪ್ಪಿರುವ ಘಟನೆ ನಗರದ ಚಿಕ್ಕಜಾಲದ ತರಬನಹಳ್ಳಿಯಲ್ಲಿ ನಡೆದಿದೆ.

ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲೂಕಿನ ಚಂದ್ರಶೇಖರ್ ಮತ್ತು ಬೆಳಗಾವಿ ಜಿಲ್ಲೆಯ ಗೋಕಾಕ್ ತಾಲೂಕು ಮೂಲದ ಸುಧಾರಾಣಿ ಮೃತ ದುರ್ದೈವಿಗಳು. ಇನ್ನೇನು ಕೆಲವೇ ದಿನಗಳಲ್ಲಿ ಹಸೆಮಣೆ ಏರಬೇಕಿದ್ದ ಈ ಜೋಡಿ ದುರಂತ ಅಂತ್ಯ ಕಂಡಿದೆ.

ತರಬನಹಳ್ಳಿಯಲ್ಲಿ ವಾಸವಿದ್ದ ಚಂದ್ರಶೇಖರ್ ಬಾಡಿಗೆ ಮನೆಗೆ ಜೂನ್ 10ರಂದು ಸಂಜೆ ಸುಧಾರಾಣಿ ಆಗಮಿಸಿದ್ದಳು. ರಾತ್ರಿ ಇಬ್ಬರು ಒಟ್ಟಿಗೆ ಸ್ನಾನ ಮಾಡಲು ಬಾತ್ ರೂಮಿಗೆ ತೆರಳಿದ್ದರು. ಬಾತ್ ರೂಮಿನ ಕಿಟಕಿ ಹಾಗೂ ಬಾಗಿಲು ಸಂಪೂರ್ಣವಾಗಿ ಲಾಕ್ ಮಾಡಿ ಗ್ಯಾಸ್ ಗೀಸರ್ ಆನ್ ಮಾಡಿದ್ದಾರೆ. ಈ ವೇಳೆ ವಿಷ ಅನಿಲ ಸೋರಿಕೆಯಾಗಿ ಸ್ನಾನ ಮಾಡುತ್ತಲೇ ಪ್ರಜ್ಞೆ ತಪ್ಪಿ ಕುಸಿದು ಬಿದ್ದು ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಂದ್ರಶೇಖರ್ ಮನೆಯಲ್ಲಿ ಇದ್ದರೂ ಭಾನುವಾರ ಬೆಳಗ್ಗೆ ಬಾಗಿಲು ತೆರೆಯದೇ ಇದ್ದಾಗ ಮಾಲೀಕ ಅನುಮಾನಗೊಂಡು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿದೆ. ಕೂಡಲೇ ಮನೆ ಮಾಲೀಕ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಪೊಲೀಸರು ಮೃತದೇಹಗಳನ್ನು ಆಸ್ಪತ್ರೆಗೆ ಶಿಫ್ಟ್ ಮಾಡಿದ್ದಾರೆ.

ಘಟನೆ ಸಂಬಂಧ ಚಿಕ್ಕಜಾಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.